
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ.8 :- ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಇದೇ ತಿಂಗಳ 11ರಂದು ಆಚರಿಸಬೇಕಿದ್ದು ಅಂದು ಸರಳವಾಗಿ ಆಚರಣೆ ಮಾಡಿ ಬರುವ ಫೆಬ್ರವರಿ ತಿಂಗಳಲ್ಲಿ ಓಬವ್ವರ ತವರೂರದ ತಾಲೂಕಿನ ಗುಡೇಕೋಟೆಯಲ್ಲಿ ಸಂಬಂದಿಸಿದ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಧೀಯಾಗಿ ಅದ್ದೂರಿಯಾಗಿ ಆಚರಣೆ ಮಾಡುವುದಾಗಿ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅದ್ದೂರಿ ಆಚರಣೆಗೆ ಅಸ್ತು ಎಂದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮಾತನಾಡುತ್ತ ಒನಕೆ ಓಬವ್ವ ತವರು ನಮ್ಮ ತಾಲೂಕಿನ ಗುಡೇಕೋಟೆ ಎನ್ನುವುದು ಹೆಮ್ಮೆಯ ವಿಷಯವಾಗಿದ್ದು ಅವರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡದೆ ಸರ್ಕಾರಿ ಆದೇಶದಂತೆ ನವೆಂಬರ್ 11ರಂದು ಸರಳವಾಗಿ ಆಚರಿಸಿ ಬರುವ ಫೆಬ್ರವರಿ ತಿಂಗಳಲ್ಲಿ ಎಲ್ಲರ ಸಹಕಾರದಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಬೇಕು ಎನ್ನುವ ಹೆಬ್ಬಯಕೆ ನನ್ನದಾಗಿದೆ ಎಂದು ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಒನಕೆ ಓಬವ್ವಳ ತವರೂರಾದ ಗುಡೇಕೋಟೆಯಲ್ಲಿ ತಾಲೂಕು ಮಟ್ಟದ ಜಯಂತಿ ಕಾರ್ಯಕ್ರಮವನ್ನು ಸರಕಾರದಿಂದ ನಡೆಸುವಂತೆ ಗುಡೇಕೋಟೆಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಆಗ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಸರಕಾರದಿಂದ ಒನಕೆ ಓಬವ್ವ ಅವರ ಜಯಂತಿಯನ್ನು ಕೂಡ್ಲಿಗಿ ಪಟ್ಟಣದಲ್ಲೇ ನಡೆಸಲಿ. ಆದರೆ, ಮುಂದಿನ ಫೆಬ್ರವರಿಯಲ್ಲಿ ಗುಡೇಕೋಟೆಯಲ್ಲಿ ಸರಕಾರದಿಂದ ಅದ್ದೂರಿಯಾಗಿ ಒನಕೆ ಓಬವ್ವಳ ಉತ್ಸವ ಮಾಡೋಣ. ಅದಕ್ಕಾಗಿ ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚಿಸಿದ್ದು, ಉತ್ಸವಕ್ಕೆ ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು. ಅದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದರು.
ಕೂಡ್ಲಿಗಿಯಲ್ಲಿ ನ.11ರಂದು ಬೆಳಗ್ಗೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಆಚರಣೆಯನ್ನು ಮಾಡಲಾಗುವುದು. ಒನಕೆ ಓಬವ್ವ ಭಾವಚಿತ್ರದ ಮೆರವಣಿಗೆ ನಡೆಸುವುದರ ಜತೆಗೆ ಜಾನಪದ ಕಲಾ ತಂಡಗಳನ್ನು ಕರೆಸುವುದು, ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ, ಛಲವಾದಿ ಸುಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸುವುದು. ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವುದು ಸೇರಿ ನಾನಾ ವಿಷಯಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ವೈ.ರವಿಕುಮಾರ್, ಸಿಪಿಐ ಸುರೇಶ್ ತಳವಾರ, ಛಲವಾದಿ ಸಂಘದ ತಾಲೂಕು ಅಧ್ಯಕ್ಷ ಮರಬನಹಳ್ಳಿ ಮಾರಪ್ಪ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರು ಶಿವರಾಜ, ಕರವೇ ಅಧ್ಯಕ್ಷ ಕಾಟೇರ ಹಾಲೇಶ್, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಮುಖಂಡರಾದ ಕಲ್ಲಹಳ್ಳಿ ಬಸಪ್ಪ, ನಿವೃತ್ತ ಕಂದಾಯ ಅಧಿಕಾರಿ ಸಿದ್ದಪ್ಪ, ನರಸಿಂಹನಗಿರಿ ಸಿ.ಪ್ರಕಾಶ್, ಗುಡೇಕೋಟೆ ಬೇಕರಿ ಸುರೇಶ್, ಕರವೇ ಶಿವಕುಮಾರ, ಶಿವರಾಜ ವರ್ಮ, ಪೇಂಟ್ ತಿಪ್ಪೇಸ್ವಾಮಿ, ಕೊಟ್ರೇಶ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.