ಒನಕೆ ಓಬವ್ವ ಜಯಂತಿ ಆಚರಣೆ

ತುಮಕೂರು, ನ. ೧೩- ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಛಲವಾದಿ ಮಹಾಸಭಾ ವತಿಯಿಂದ ನಗರದ ಟೌನ್‌ಹಾಲ್ ಮುಂಭಾಗದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ಭಾನುಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನು ಆಚರಿಸಲು ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ ವಿಧಾನಪರಿಷತ್ ಚುನಾವಣಾ ನೀತಿ ಸಂಹಿಂತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಕಾರ್ಯಕ್ರಮ ಮಾಡಲು ಸಾಧ್ಯವಾಗದಿರುವುದು ವಿಷಾದನೀಯ ಎಂದರು.
ಮುಂದಿನ ದಿನಗಳಲ್ಲಿ ತನ್ನ ಜೀವದ ಹಂಗು ತೊರೆದು ಹೈದರಾಲಿಯ ಸೈನಿಕರಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವ ಅವರ ಜಯಂತಿಯನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಸರ್ಕಾರದ ವತಿಯಿಂದ ಆಚರಿಸುವಂತಾಗಲಿ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ರಾಜ್ಯ ಸರ್ಕಾರ ಕೇವಲ ಚಿತ್ರದುರ್ಗಕ್ಕೆ ಮಾತ್ರ ಸಿಮೀತಗೊಳಿಸದೆ ಇಡೀ ದೇಶವೇ ಆಚರಿಸುವಂತೆ ಮಾಡಬೇಕು. ಮಕ್ಕಳಿಗೆ ವೀರ ವನಿತೆಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಪಠ್ಯ ಪುಸ್ತಕಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ರಾಜ್ಯ ಸರ್ಕಾರ ಒನಕೆ ಓಬವ್ವ ಜಯಂತಿಯನ್ನು ನಾಡ ಹಬ್ಬವಾಗಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿಯಾದರೂ ಸರಳವಾಗಿ ಆಚರಿಸಬೇಕಿತ್ತು. ಮುಂದಿನ ದಿನಗಳಲ್ಲಿ ಸರ್ಕಾರ ಅತಿ ವಿಜೃಂಭಣೆಯಿಂದ ಆಚರಿಸಬೇಕೆಂದು ನಮ್ಮ ಆಗ್ರಹವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಸರ್ಕಾರ ಇಡೀ ನಾಡಿಗೆ ವೀರ ವನಿತೆ ಒನಕೆ ಓಬವ್ವನ ಧೈರ್ಯ ಮತ್ತು ಸಾಹಸ ತಿಳಿಯುವಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಓಬವ್ವ ಜಯಂತಿ ಆಚರಿಸುವಂತಾಗಬೇಕು. ಶಾಲಾ-ಕಾಲೇಜುಗಳಲ್ಲಿ ಇದರ ಬಗ್ಗೆ ವಿಚಾರ ಸಂಕಿರಣ ಆಯೋಜಿಸಬೇಕು. ತನ್ನ ಜೀವವನ್ನು ಬಲಿಕೊಟ್ಟು ಚಿತ್ರದುರ್ಗ ಕೋಟೆಯನ್ನು ಸಂರಕ್ಷಿಸಿದ ದಿಟ್ಟೆ ಮಹಿಳೆ. ಇಂತಹ ವಿಚಾರ ಹೆಚ್ಚಿನ ಪ್ರಚಾರ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿ.ಎನ್.ರಾಮಯ್ಯ, ಎನ್.ಕೆ.ನಿಧಿಕುಮಾರ್,ನರಸೀಯಪ್ಪ, ಹೆಗ್ಗರೆ ಕೃಷ್ಣಪ್ಪ, ಕೆ.ಗೋವಿಂದರಾಜು, ನಾರಾಯಣ್, ಮಾರುತಿ, ಸಿದ್ಧಲಿಂಗಯ್ಯ, ಜೆ.ಸಿ. ತ್ಯಾಗರಾಜು, ಮನು, ಟಿ.ಆರ್. ನಾಗೇಶ್, ಸೋರೆಕುಂಟೆ ಯೋಗೀಶ್, ಹೆಬ್ಬತ್ತನಹಳ್ಳಿ ಶ್ರೀನಿವಾಸ್, ಶಿವರಾಜು ಸಂತೆಪೇಟೆ, ರಜನಿಕಾಂತ್, ರಂಜನ್, ಗುರುಪ್ರಸಾದ್, ಛಲವಾದಿ ಶೇಖರ್, ನರಸಿಂಹಮೂರ್ತಿ, ಮಾರುತಿ, ಶಿವಣ್ಣ, ರಾಜಶೇಖರ್, ಶಿವರಾಜ್, ಬೋರೇಗೌಡ, ಸಿದ್ಧಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.