ಒನಕೆ ಓಬವ್ವಳ ಪ್ರತಿಮೆ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ನಾಳೆ ಗುಡೇಕೋಟೆಯಲ್ಲಿ ಪ್ರತಿಭಟನೆ.


ಕೂಡ್ಲಿಗಿ.ಜು.31 :- ತಾಲೂಕಿನ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಗುಡೇಕೋಟೆ  ವೀರವನಿತೆ ಓಬವ್ವಳ ತವರೂರಾಗಿದ್ದು ಇಲ್ಲಿ ಆ ಮಹಿಳೆಯ ಹೆಸರಿನ ವೃತ್ತ ಹಾಗೂ ಪ್ರತಿಮೆ ನಿರ್ಮಿಸಬೇಕು, ಏಷ್ಯಾಖಂಡದ ಎರಡನೇ ಕರಡಿಧಾಮಕ್ಕೆ ಕರ್ನಾಟಕದ ಯುವಕಣ್ಮಣಿ ಅಜಾತಶತ್ರು ಪುನೀತ್ ರಾಜಕುಮಾರ ಅವರ ಹೆಸರಿಡಬೇಕು ಅಲ್ಲದೆ ಪಾಳೇಗಾರರು ಆಳಿದ  ಈ ನೆಲದ ಅಭಿವೃದ್ಧಿಗೆ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ, ಎಐವೈಎಫ್, ಕಿಸಾನ್ ಸಭಾ ಹಾಗೂ ಮಹಿಳಾ ಸ್ವಸಹಾಯಸಂಘ ಹಾಗೂ ಯುವಕಾರ್ಯಕರ್ತರು ನಾಳೆ ಗುಡೇಕೋಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.
ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ  ತಾಲೂಕಿನ ಐತಿಹಾಸಿಕ ಪಾಳೆಗಾರರ ಸಂಸ್ಥಾನ ಗುಡೇಕೋಟೆ ಗ್ರಾಮದಲ್ಲಿ
 ಗ್ರಾಮದ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಸರ್ಕಲ್ ನಲ್ಲಿ ಮುಖ್ಯ ರಸ್ತೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಒತ್ತಾಯಿಸಿರುವುದಾಗಿ  ಪ್ರತಿಭಟನೆಯ  ಸಂಘಟಕರು ತಿಳಿಸಿದ್ದಾರೆ
 ಪ್ರಮುಖ ಬೇಡಿಕೆ ಇಂತಿದೆ :  ವೀರವನತೆ ಒನಕೆ ಓಬವ್ವಳ ವೃತ್ತ ಹಾಗೂ  ಪ್ರತಿಮೆ ನಿರ್ಮಾಣ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವುದು. ಕಾಲೇಜ್ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಿಸಬೇಕು,  ನಾಡಕಚೇರಿ ತಾಂತ್ರಿಕ ಸಮಸ್ಯೆ ಹಾಗೂ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು.
 ಕರಡಿ ಧಾಮದ ಕಾಡುಪ್ರಾಣಿಗಳಿಂದ ರೈತರ ಬೆಳೆಗಳಿಗೆ ಸಂರಕ್ಷಣೆ ಹಾಗೂ ಕರಡಿ ಧಾಮದ ಯಾವುದಾದರೂ ಒಂದು ಮುಖ್ಯ ದ್ವಾರಕ್ಕೆ  ದಿವಂಗತ ಚಲನಚಿತ್ರ ನಟ ಡಾ.ಪುನೀತ್ ರಾಜಕುಮಾರ್ ಹೆಸರಿಡಬೇಕು.
 ಪಶು ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಧಿಕಾರಿ ನೇಮಿಸಬೇಕು. ಗ್ರಾಮ ಪಂಚಾಯಿತಿ ಕುಂದು ಕೊರತೆ ಹಾಗೂ ಆಶ್ರಯ ಮನೆಗಳ ಕೊರತೆಯ ಬಗ್ಗೆ.ಯುವಕರಿಗೆ ಆಟದ ಮೈದಾನ ಇಲ್ಲದಿರುವುದನ್ನು ಗಮನಿಸಿ ಮೈದಾನ ನಿರ್ಮಿಸಬೇಕು.  ಊರಿನ ಮಧ್ಯಭಾಗದಲ್ಲಿರುವ ಸಾರಾಯಿ ಅಂಗಡಿ ಊರಿನ ಹೊರಗಡೆ ಹಾಕುವಲ್ಲಿ ಮುಂದಾಗಬೇಕು. ಕೆಇಬಿ ಸಪರೇಟ್ ಫಿಲ್ಟರ್ ವ್ಯವಸ್ಥೆ. ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು. ಅಳಿವಿನ ಅಂಚಿನಲ್ಲಿರುವ ತಂಗಾಳಿ ಮಹಲ್ ರಕ್ಷಿಸಬೇಕು. ಪ್ರವಾಸಿ ಮಂದಿರ ಅವ್ಯವಸ್ಥೆ ಹಾಗೂ ನೂತನ ಕಟ್ಟಡ  ನಿರ್ಮಿಸಬೇಕು.
 ಗುಡೆಕೋಟೆ ಗ್ರಾಮದ ಹೃದಯ ಭಾಗದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಬೇಕು.ಹೀಗಿರುವ ಸರ್ಕಾರಿ ಉರ್ದು ಶಾಲೆ ಸುತ್ತಮುತ್ತಲಿನಲ್ಲಿರುವ  ಚಿಕನ್ ಅಂಗಡಿಗಳನ್ನು ತೆರವುಗೊಳಿಸಿ ಎಪಿಎಂಸಿ ಹತ್ತಿರ ಮಾಂಸ ಮಾರಾಟದ ಅಂಗಡಿಗಳಿಗೆ ಅವಕಾಶ ಮಾಡಿಕೊಡಬೇಕು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಹೋಬಳಿ ಕೇಂದ್ರದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಮಂಜೂರು ಮಾಡಬೇಕು. ನಾಡ ಕಚೇರಿಯಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಅವುಗಳನ್ನು ಕಾಲಕಾಲಕ್ಕೆ ಸಮರ್ಪಕವಾಗಿ ತಲುಪಿಸುವತ್ತ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು.ನಿರಂತರ ಮಳೆಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾನಿರತರು ಅಧಿಕಾರಿಗಳಿಗೆ ಆಗ್ರಹಿಸಲಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ಕರ್ನಾಟಕ ರಾಜ್ಯ ರೈತ ಸಂಘ. ಎ ಐ ವೈ ಎಫ್. ಕಿಸಾನ್ ಸಭಾ. ಕಾರ್ಮಿಕರ ಸಂಘ. ಸ್ಥಳೀಯ ಸಂಘ ಸಂಸ್ಥೆಗಳು ದಲಿತ ಪರ ಸಂಘಟನೆಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗುಡೇಕೋಟೆಯ  ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.  ಶಿವಕುಮಾರ ಪತ್ರಿಕಾ  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ