ಒತ್ತೆಯಾಳುಗಳ ಪತ್ತೆ ಕಾರ್ಯಕ್ಕೆ ಯುಕೆಯ ಕಣ್ಗಾವಲು ವಿಮಾನ

ಲಂಡನ್, ಡಿ.೩- ಒಂದೆಡೆ ಹಮಾಸ್ ಪಡೆಯನ್ನು ವಿಶ್ವದಲ್ಲಿ ಎಲ್ಲೇ ನೆಲೆಸಿದ್ದರೂ ಸಂಪೂರ್ಣ ಸರ್ವನಾಶಕ್ಕೆ ಯೋಜನೆ ಹಾಕಿಕೊಂಡಿದ್ದರೆ ಮತ್ತೊಂದೆಡೆ ಯುನೈಟೆಡ್ ಕಿಂಗ್‌ಡಮ್ ಇದೀಗ ಹಮಾಸ್ ಬಳಿಯಲ್ಲಿರುವ ಒತ್ತೆಯಾಳುಗಳ ಪತ್ತೆಗೆ ಕಣ್ಗಾವಲು ವಿಮಾನಗಳ ಹಾರಾಟವನ್ನು ಆರಂಭಿಸಿದೆ.
ಈ ಕಣ್ಗಾವಲು ವಿಮಾನಗಳು ಸಂಭಾವ್ಯ ಒತ್ತೆಯಾಳು ಇರುವಿಕೆಯ ಬಗ್ಗೆ ಗುಪ್ತಚರವನ್ನು ಸಂಗ್ರಹಿಸಲು ಸಹಾಯ ಮಾಡಲಿದೆ. ಹಮಾಸ್ ಬಳಿ ೨೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಒತ್ತೆಯಾಳಿದ್ದರೂ ಸದ್ಯ ಕಳೆದ ಏಳು ದಿನಗಳ ಕದನ ವಿರಾಮದಲ್ಲಿ ಸುಮಾರು ೬೦ರಷ್ಟು ನಾಗರಿಕರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಹಮಾಸ್ ಬಳಿರುವ ಉಳಿದ ನಾಗರಿಕರನ್ನು ಬಿಡುಗಡೆಗೊಳಿಸುವಲ್ಲಿ ಇಸ್ರೇಲ್ ಸೇರಿದಂತೆ ಹಲವು ದೇಶಗಳು ಹರಸಾಹಸ ಪಡುತ್ತಿದೆ. ಈ ನಡುವೆ ಬ್ರಿಟನ್ ಇದೀಗ ಒತ್ತೆಯಾಳುಗಳ ಪತ್ತೆಗೆ ಕಣ್ಗಾವಲು ವಿಮಾನಗಳ ಹಾರಾಟ ಆರಂಭಿಸಿದೆ. ಇದಕ್ಕೆ ಕಾರಣ ಕೂಡ ಇದೆ. ಸದ್ಯ ಹಮಾಸ್ ಬಳಿ ಯುನೈಟೆಡ್ ಕಿಂಗ್‌ಡಮ್‌ನ ಐವರು ನಾಗರಿಕರು ಕೂಡ ಇದ್ದು, ಇವರ ಒಟ್ಟು ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬ್ರಿಟಿಷ್ ಪ್ರಜೆಗಳ ಸುರಕ್ಷತೆಯು ನಮ್ಮ ಅತ್ಯಂತ ಆದ್ಯತೆಯಾಗಿದೆ. ಚಾಲ್ತಿಯಲ್ಲಿರುವ ಒತ್ತೆಯಾಳು ರಕ್ಷಣಾ ಚಟುವಟಿಕೆಗೆ ಬೆಂಬಲವಾಗಿ, ರಕ್ಷಣಾ ಸಚಿವಾಲಯವು ಪೂರ್ವ ಮೆಡಿಟರೇನಿಯನ್ ಮೇಲೆ ಕಣ್ಗಾವಲು ವಿಮಾನಗಳನ್ನು ನಡೆಸುತ್ತದೆ, ಇಸ್ರೇಲ್ ಮತ್ತು ಗಾಜಾದ ಮೇಲೆ ವಾಯು ಜಾಗದಲ್ಲಿ ಕಾರ್ಯನಿರ್ವಹಿಸಲಿದೆ. ವಿಮಾನವು ನಿರಾಯುಧವಾಗಿದ್ದು, ಒತ್ತೆಯಾಳುಗಳನ್ನು ಪತ್ತೆಹಚ್ಚಲು ಮಾತ್ರ ಕಾರ್ಯನಿರ್ವಹಿಸಲಿದೆ. ಒತ್ತೆಯಾಳು ರಕ್ಷಣೆಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಒತ್ತೆಯಾಳುಗಳ ರಕ್ಷಣೆಯ ಜವಾಬ್ದಾರಿಯುತ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಇನ್ನು ರಾಯಲ್ ಏರ್‌ಫೋರ್ಸ್ ಗುಪ್ತಚರ ಸಂಗ್ರಹಕ್ಕಾಗಿ ಬಳಸುವ ಶ್ಯಾಡೋ ಆರ್ ೧ ಗಳನ್ನು ಈ ವಿಮಾನವು ಒಳಗೊಂಡಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.