ಒತ್ತು ಶಾವಿಗೆ ಮಾಡುವ ವಿಧಾನ

ಅಕ್ಕಿ ? ಒಂದು ಸೇರು
ನೀರು- ನಾಲ್ಕು ಲೋಟ
ಉಪ್ಪು ? ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಅಕ್ಕಿಯನ್ನು ನೀವು ಶಾವಿಗೆ ತಯಾರಿಸುವುದಕ್ಕೂ ೬ ತಾಸುಗಳ ಮುಂಚೆ ನೀರಿನಲ್ಲಿ ತೊಳೆದು ನೆನೆಸಿಡಿ. ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಅಗತ್ಯವಿರುವಷ್ಟು ನೀರು ಸೇರಿಸಿಕೊಳ್ಳಿ. ದೋಸೆ ಹಿಟ್ಟಿನ ಹದದಲ್ಲಿ ಅಕ್ಕಿಯ ರುಬ್ಬಿದ ಮಿಶ್ರಣ ಸಿದ್ಧವಾಗಲಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಅದನ್ನು ಒಂದು ಬಾಣಲೆಯಲ್ಲಿ ಹಾಕಿ ಕೈಯಾಡುತ್ತಾ ಮಗಚುತ್ತಲೆ ಇರಿ. ರಾಗಿಮುದ್ದೆ ಮಾಡುವಾಗ ಅನುಸರಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಮಿಶ್ರಣವು ಗಟ್ಟಿಯಾಗಿ ಉಂಡೆ ಕಟ್ಟುವ ಹದಕ್ಕೆ ತಲುಪಿದ ನಂತರ ಬಾಣಲೆಯನ್ನು ಒಲೆಯಿಂದ ಇಳಿಸಿ. ಹದವಾಗಿ ಮಿಶ್ರಣವು ತಣಿಯಲು ಬಿಡಿ. ನಂತರ ನಿಮ್ಮ ಶಾವಿಗೆ ಅಚ್ಚಿನೊಳಗೆ ಎಷ್ಟು ದೊಡ್ಡ ಉಂಡೆಯನ್ನು ಹಾಕುವುದಕ್ಕೆ ಸಾಧ್ಯವಿದೆಯೋ ಅಷ್ಟು ದೊಡ್ಡದಾದ ಉದ್ದನೆಯ ಅಂದರೆ ಸಿಲಿಂಡರ್ ಆಕೃತಿಯ ಉಂಡೆಗಳನ್ನು ತಯಾರಿಸಿ. ಬಿಸಿಯಾದ ಮಿಶ್ರಣದಿಂದ ಉಂಡೆಯನ್ನು ತಯಾರಿಸಬೇಕಾಗಿರುವುದರಿಂದಾಗಿ ಸ್ವಲ್ಪ ನೀರನ್ನು ಮುಟ್ಟುತ್ತಾ ಮುಟ್ಟುತ್ತಾ ಉಂಡೆ ತಯಾರಿಸಿದರೆ ಕೈ ಸುಡುವುದಿಲ್ಲ. ತಯಾರಿಸಿದ ಉಂಡೆಗಳನ್ನು ಅಟ್ಟದಲ್ಲಿ ಇಟ್ಟು ಸುಮಾರು ೩೦ ನಿಮಿಷ ಬೇಯಿಸಿ. ಬೆಂದ ಉಂಡೆಗಳನ್ನು ಇದೀಗ ಶಾವಿಗೆ ಅಚ್ಚಿನೊಳಗೆ ಹಾಕಿ ಒತ್ತಬೇಕಾಗುತ್ತದೆ. ಅನೇಕ ರೀತಿಯ ಶಾವಿಗೆ ಅಚ್ಚುಗಳಿರುತ್ತದೆ. ತಾಮ್ರದ, ಹಿತ್ತಾಳೆಯ, ಮರದ ಶಾವಿಗೆ ಅಚ್ಚುಗಳು ಲಭ್ಯ. ಅಷ್ಟೇ ಅಲ್ಲ ಒಬ್ಬರೆ ಶಾವಿಗೆ ತಯಾರಿಸಬಹುದಾದ ಅಚ್ಚುಗಳೂ ಇವೆ. ಶಾವಿಗೆ ಒತ್ತುವಾಗ ಎಳೆ ಎಳೆಯಾಗಿ, ವೃತ್ತಾಕಾರದಲ್ಲಿ ಸುಂದರವಾಗಿ ಕಾಣುವಂತೆ ಸಿದ್ಧಗೊಳಿಸಿ. ಈ ಶಾವಿಯನ್ನು ಸಿಹಿಯಾದ ಕಾಯಿಹಾಲು, ಸಾಸಿವೆ ಎಣ್ಣೆ, ಉಪ್ಪಿನಕಾಯಿ ರಸ, ಸಾಂಬಾರಿನ ಜೊತೆಗೆ ಸೇವಿಸಬಹುದು. ಅಥವಾ ಒಗ್ಗರಣೆ ಹಾಕಿ ರುಚಿರುಚಿಯಾಗಿ ಸೇವಿಸಬಹುದು.