
ಬೆಂಗಳೂರು. ಫೆ. ೨೨- ಬೆಂಗಳೂರಿನ ಬೇಗೂರಿನ ಏಳುಗುಂಟೆ ಗ್ರಾಮದಲ್ಲಿ ಬಿಡಿಎ ಜಮೀನನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಬಿಡಿಎ ಆಯುಕ್ತರಿಗೆ ಇಂದೇ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಸೋಮಶೇಖರ್ ಚಿರೆಡ್ಡಿ ಮತ್ತು ಸತೀಶ್ ರೆಡ್ಡಿಯವರ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಬಿಡಿಎಗೆ ಸೇರಿದ ೨.೬೯ ಎಕರೆ ಜಮೀನು ತೆರವಿಗೆ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡುತ್ತೇನೆ. ಜಮೀನನ್ನು ಬಿಡಿಎ ವಶಕ್ಕೆ ಪಡೆಯಲಾಗುವುದು ಎಂದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ್ದ ಸದಸ್ಯರಾದ ಸೋಮಶೇಖರರೆಡ್ಡಿ ಮತ್ತು ಸತೀಶ್‌ರೆಡ್ಡಿ ಅವರು ಬೇಗೂರಿನ ಸರ್ವೆ ನಂ. ೯೯-೧೧ ರಲ್ಲಿ ೨.೬ ಎಕರೆ ಜಮೀನನ್ನು ಬಿಡಿಎ ೧೯೬೬ ರಲ್ಲಿ ಭೂಸ್ವಾಧೀನ ಪಡಿಸಿಕೊಂಡು ನಿವೇಶನ ಹಂಚಿಕೆ ಮಾಡಿದೆ. ಆದರೆ ಇಲ್ಲಿ ಉಮಾಪತಿ ಶ್ರೀನಿವಾಸಗೊಡ ಎಂಬುವರು ೭ ನಿವೇಶನಗಳಲ್ಲಿ ಶೆಡ್‌ಗಳನ್ನು ಹಾಕಿ ಅತಿಕ್ರಮಣ ಮಾಡಿದ್ದಾರೆ. ಈ ಶೆಡ್‌ಗಳು ಅನಧಿಕೃತ ಎಂದು ವರದಿ ಬಂದಿದ್ದರೂ ಈ ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಒತ್ತುವರಿಯನ್ನು ತೆರವುಗೊಳಿಸಿ ನಿವೇಶನದಾರರಿಗೆ ನಿವೇಶನ ಕೊಡಿಸಬೇಕು ಎಂದು ಅವರುಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು,