ಒತ್ತುವರಿ ತೆರವಿಗೆ ವ್ಯಾಪಾರಿಗಳ ವಿರೋಧ

ಕೆ.ಆರ್.ಪುರ,ಜು.೧೪- ಕೆ.ಆರ್. ಪುರದ ರಾಷ್ಟ್ರೀಯ ಹೆದ್ದಾರಿ ೭೫ರ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗದ ತೆರವು ಕಾರ್ಯಚರಣೆ ವ್ಯಾಪಾರಿಗಳ ವ್ಯಾಪಕ ವಿರೋಧ ನಡೆಯಿತು.ಮಹದೇವಪುರ ವಲಯ ಆಯುಕ್ತೆ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಗಿದ್ದು, ಜೆಸಿಬಿಗೆ ಅಡ್ಡವಾಗಿ ನಿಂತು ವ್ಯಾಪಾರಿಗಳು ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಬಿಬಿಎಂಪಿ, ಕೆ.ಆರ್.ಪುರ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಒತ್ತುವರಿ ತೆರವು,ಪಾದಚಾರಿ ಮಾರ್ಗ ಒತ್ತುವರಿಯಿಂದ ಸಂಚಾರ ದಟ್ಟಣೆ ಸಮಸ್ಯೆ ಸಹ ಉಂಟಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿ ತೆರವು ಗೊಳಿಸಲಾಗಿದೆ.ಪಾದಚಾರಿ ಮಾರ್ಗದ ಒತ್ತುವರಿ ತೆರವು ಸಂಬಂಧಿಸಿದಂತೆ ಮುಂಗಡವಾಗಿ ನೋಟಿಸ್ ನೀಡಿದ್ದು,ಸಮಾಯವಾಕಾಶದ ನಂತರ ತೆರವು ಕಾರ್ಯಚರಣೆ ಮಾಡಲಾಗಿದೆ.
ಮಾರತಹಳ್ಳಿ ಮುಖ್ಯ ರಸ್ತೆ, ಎಚ್.ಎ.ಎಲ್, ಹೂಡಿ, ವೈಟ್‌ಫೀಲ್ಡ್ ಮತ್ತು ಇತರೆಡೆ ವಿದ್ಯುಬೀದಿಬದಿ ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿದ್ದರಿಂದ ವಲಯದಲ್ಲಿ ಹಲವು ಅಪಘಾತಗಳು ಸಂಭವಿಸಿದೆ. ಈ ಅಂಗಡಿಗಳ ಕಾರಣ ಜನರು ರಸ್ತೆ ಮೇಲೆ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಮಾರ್ಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಂಗಡಿ ಮುಂಗಟ್ಟುಗಳನ್ನು ಮತ್ತು ಅನಧಿಕೃತವಾಗಿ ಅಳವಡಿಸಿದ್ದ ಒಎಫ್‌ಸಿಯನ್ನ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.
ಪಾದಚಾರಿಗಳ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.’ಕೇಬಲ್‌ಗಳನ್ನು ಜೋತು ಹಾಕಿದರೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವುದು. ಬ್ಯಾನರ್, ಬಂಟಿಂಗ್ಸ್, ಅಂಗಡಿ ಮುಂಭಾಗದಲ್ಲಿನ ಶೀಟ್‌ಗಳನ್ನು ತೆರವುಗೊಳಿಸಲಾಗಿದೆ. ಜತೆಗೆ ಪಾದಚಾರಿ ಮಾರ್ಗದಲ್ಲಿರುವ ಗಿಡಗಳ ರೆಂಬೆಗಳ ಕಟಾವು ಮಾಡಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಲಾಗಿದೆ.