ಒತ್ತುವರಿ ಕಟ್ಟಡ ತೆರವಿಗೆ ಕ್ರಿಯಾ ಯೋಜನೆ

ಬೆಂಗಳೂರು, ಆ.೨೨- ಹೈಕೋರ್ಟ್ ಸೂಚನೆ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಸೂಚನೆ ಅನ್ವಯ ಅನಧಿಕೃತ ಕಟ್ಟಡ ತೆರವಿಗೆ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿ ಇರುವ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಇನ್ನೂ, ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ವರದಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಲಾಗುವುದು ಎಂದರು.
ಅನಧಿಕೃತ ಬ್ಯಾನರ್ ಕುರಿತು ಪ್ರತಿಕ್ರಿಯಿಸಿ, ಎಲ್ಲಾ ವಲಯ ಆಯುಕ್ತರಿಗೆ ಅನಧಿಕೃತ ಫ್ಲೆಕ್ಸ್ ವಿಚಾರವಾಗಿ ದಂಡ ಹಾಕಿ ಕ್ರಮಕೈಗೊಳ್ಳಲು ಸೂಚನೆ ಕೊಟ್ಟಿದ್ದೆ. ಆ ಪ್ರಕಾರ ಎಲ್ಲಾ ಕಡೆ ಅನಧಿಕೃತವಾಗಿ ಅಳವಡಿಕೆಯಾಗಿರುವ ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.
ಅದರಲ್ಲೂ,ಪೂರ್ವ ವಲಯದ ಆಯುಕ್ತರು ಕೆಪಿಸಿಸಿ ಕಚೇರಿಯಲ್ಲಿದ್ದ ಫ್ಲೆಕ್ಸ್ ತೆರವು ಮಾಡಿಸಿದ್ದಾರೆ. ಈ ಮೊದಲು ನಿಗದಿ ಮಾಡಿರುವಂತೆ ದಂಡವನ್ನೂ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಯಶವಂತಪುರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿರುವ ವಿಚಾರ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ೧೧೦ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅನುದಾನ ಕೊಡಲಾಗಿದೆ.೧೧೦ ಹತ್ತು ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಆಗಿದೆ. ಹೀಗಾಗಿ ಪಾಲಿಕೆಯ ಹೊರ ವಲಯಗಳಲ್ಲಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಅದರಂತೆ ಯಶವಂತಪುರ ಕ್ಷೇತ್ರಕ್ಕೂ ಅನುದಾನ ಕೊಡಲಾಗಿದೆ.ಹೊರ ವಲಯಗಳಿಗೆ ಸುಮಾರು ೧೦ ಕೋಟಿ ವರೆಗೆ ಅನುದಾನ ಕೊಡಲಾಗಿದೆ. ವಲಯ ಆಯುಕ್ತರ ವಿವೇಚನೆಗೆ ತಕ್ಕಂತೆ ಹಣ ಖರ್ಚು ಮಾಡಲು ಹೇಳಲಾಗಿದೆ ಎಂದು ಆಯುಕ್ತರು ತಿಳಿಸಿದರು.