ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಸಮರ

ಜೆಸಿಬಿ ಘರ್ಜನೆ
ನಗರದ ಮಹದೇವಪುರದ ಮುನ್ನೆಕೊಳಲಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ಮನೆಯಲ್ಲಿದ್ದ ಸಾಮಾನುಗಳನ್ನು ಹೊರ ಹಾಕಿದ್ದು, ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಕಂಗಾಲಾಗಿ ಕುಳಿತಿರುವುದು.

ಬೆಂಗಳೂರು, ಜೂ.೧೭- ಮಳೆಗಾಲದಲ್ಲಿ ಪ್ರವಾಹದ ಭೀತಿ ಉಂಟಾಗುವ ಅವಾಂತರಗಳಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ರಾಜ್ಯ ಸರ್ಕಾರ, ರಾಜಕಾಲುವೆ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದು, ಹಲವು ದಿನಗಳ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ, ಬುಲ್ಡೋಜರ್‌ಗಳೊಂದಿಗೆ ಕಾರ್ಯಾಚರಣೆಗಿಳಿದಿವೆ.
ಈ ಹಿಂದೆ ಮಳೆ ನೀರಿನಿಂದ ಬೆಂಗಳೂರಿನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿತ್ತು. ಜತೆಗೆ ರಾಜಕಾಲುವೆಗಳ ಒತ್ತುವರಿಯೇ ಪ್ರವಾಹ ಪರಿಸ್ಥಿತಿಗೆ ಮೂಲ ಕಾರಣವಾಗಿತ್ತು. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಇದೀಗ ಹೊಸ ಸರ್ಕಾರ ರಾಜಕಾಲುವೆ ಮೇಲಿರುವ ಕಟ್ಟಡಗಳನ್ನು ಕೆಡವಲು ಜೆಸಿಬಿ ಯಂತ್ರಗಳು ಲಗ್ಗೆ ಹಾಕಿದ್ದು, ಮಹದೇವಪುರ ಭಾಗದಿಂದಲೇ ಇಂದಿನಿಂದ ತೆರವು ಕಾರ್ಯಾಚರಣೆ ಶುರು ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜನರ ತೀವ್ರ ವಿರೋಧದ ಮಧ್ಯೆಯೇ ಮಹದೇವಪುರ ವಲಯದ ಹಲವು ಕಡೆ ಒತ್ತುವರಿ ತೆರವುಗೊಳಿಸಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಮಹಾದೇವ ಪುರ ವಲಯದ ಅಧಿಕಾರಿ, ಮುನೇಕೊಳಲು ಪ್ರದೇಶದಲ್ಲಿ ತೆರವು ಮಾಡಲು ಬಂದಿದ್ದೇವೆ.ಕೆಆರ್ ಪುರದ ಹೊಯ್ಸಳ ನಗರದಲ್ಲಿ ತೆರವು ಮಾಡಲು ಅಂಗಡಿಗಳು ಸಮಯಾವಕಾಶ ಕೇಳಿದ್ದಾರೆ ಮುನೇಕೊಳಲು ವಾರದ ಹಿಂದೆ ಸಿದ್ದತೆ ನಡೆಸಿದ್ದೇವೆ ಎಂದರು.ಇನ್ನೂ, ಇಲ್ಲಿ ವಕೀಲರ ತಡೆಯಾಜ್ಞೆ ಇದೆ ಎಂದು ಪತ್ರ ತೋರಿಸಿದ್ದಾರೆ.ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ.ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್ ಗಾರ್ಡನ್ ಸರ್ವೇ ನಂಬರ್ ಇದೆ ಎಂದು ಹೇಳ್ತಿದ್ದಾರೆ ಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ ಎಂದು ವಿವರಿಸಿದರು.ಇಲ್ಲಿ ೨೨ ಕಡೆ ಗುರುತು ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡ್ದೇವೆ ಎಂದ ಅವರು, ಯಾವುದೇ ಕಾರಣಕ್ಕೂ ಒತ್ತುವರಿದಾರರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಒತ್ತುವರಿ ಹಿನ್ನೆಲೆ: ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ೮೪೦ ಕಿ. ಮೀ ವ್ಯಾಪ್ತಿಯಲ್ಲಿ ರಾಜಕಾಲುವೆ ಇದೆ. ವೃಷಭಾವತಿ, ಕೋರಮಂಗಲ, ಚೆಲ್ಲಘಟ್ಟ ವ್ಯಾಲಿ ಹಾಗೂ ಹೆಬ್ಬಾಳ ಕಣಿವೆ ಪ್ರಮುಖ ರಾಜಕಾಲುವೆಗಳಾಗಿವೆ.
೪೧೫ ಕಿ.ಮೀ ಉದ್ದದ ಪ್ರಾಥಮಿಕ ಹಂತದ ಕಾಲುವೆ, ೪೨೬ ಕಿ.ಮೀ ಉದ್ದದ ದ್ವಿತೀಯ ಹಂತದ ಕಾಲುವೆಯನ್ನು ಹೊಂದಿದೆ. ನಗರದಲ್ಲಿ ಉಂಟಾಗುವ ಪ್ರವಾಹ ನಿಯಂತ್ರಣ ಮಾಡುವ ಉದ್ದೇಶದಿಂದ ೨೦೧೬ರಲ್ಲಿ ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆದಿದ್ದು, ೨,೬೨೬ ಕಡೆ ರಾಜಕಾಲುವೆ ಒತ್ತುವರಿಗಳನ್ನು ಪತ್ತೆ ಮಾಡಲಾಗಿತ್ತು. ಈ ಪೈಕಿ ೨೦೧೬-೧೭ನೇ ಸಾಲಿನಲ್ಲಿ ೪೨೮, ೨೦೧೮-೧೯ನೇ ಸಾಲಿನಲ್ಲಿ ೧೫೦೨ ಹಾಗೂ ೨೦೨೦ರಲ್ಲಿ ೭೧೪ ಒತ್ತುವರಿ ಪ್ರಕರಣ ತೆರವು ಮಾಡಲಾಗಿದೆ.
ಪಾಲಿಕೆಗೆ ಮುಜುಗರ
ತಹಶೀಲ್ದಾರ್ ಎಡವಟ್ಟು ಮುಜುಗರಕ್ಕೀಡಾದ ಬಿಬಿಎಂಪಿ..!
ರಾಜಕಾಲುವೆ ತೆರವು ವಿಚಾರದಲ್ಲಿ ಬಿಬಿಎಂಪಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ನಗೆಪಾಟಲಿಗೆ ಪಾಲಿಕೆ ಅಧಿಕಾರಿಗಳು ಗುರಿಯಾಗಿದ್ದಾರೆ.ಸೆಪ್ಟೆಂಬರ್ ನಲ್ಲಿ ತಡೆಯಾಜ್ಞೆ ಕೊಟ್ಟಿದ್ದರೂ ಬಿಬಿಎಂಪಿ ನಕ್ಷೆಯನ್ನು ಬೆಂಗಳೂರು ಉತ್ತರ ತಹಶೀಲ್ದಾರ್ ತರಲಿಲ್ಲ.ಇದರಿಂದ ತೆರವು ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು.
ಅಲ್ಲದೆ, ತಡೆಯಾಜ್ಞೆ ಬಗ್ಗೆ ಬಿಬಿಎಂಪಿ ಗಮನಕ್ಕೆ ತಾರದ ತಹಶೀಲ್ದಾರ್..ಇದೇ ತಿಂಗಳ ೧೫ ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು
ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಇದರ ಬಗ್ಗೆ ಗಮನಕ್ಕೆ ತಹಶೀಲ್ದಾರ್ ತಾರದ ಕಾರಣ ಮುಜುಗರಕ್ಕೀಡದರು.
ನಿವಾಸಿಗಳ ಆಕ್ರೋಶ…!
ಕೆಆರ್ ಪುರ, ಹೊಯ್ಸಳನಗರ, ಮಹದೇವಪುರ ಸೇರಿದಂತೆ ಹಲವೆಡೆ ಒತ್ತುವರಿ ತೆರವು ಕಾರ್ಯ ಆರಂಭವಾಗಿದ್ದು, ಜೆಸಿಬಿಗಳು ಘರ್ಜಿಸುತ್ತಿವೆ.ಇದರ ನಡುವೆ ಹಲವೆಡೆ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಬಳಿ ದಾಖಲೆಗಳು ಇದ್ದರೂ ಅಧಿಕಾರಿಗಳು ಈಗ ಏಕಾಏಕಿ ಕಟ್ಟಡ, ಮನೆಗಳ ತೆರವಿಗೆ ಮುಂದಾಗುತ್ತಿದ್ದಾರೆ. ಇದು ಸೂಕ್ತ ಕ್ರಮವಲ್ಲ ಎಂದು ಕಿಡಿಕಾರಿದ್ದಾರೆ.ಹಲವಾರು ವರ್ಷಗಳಿಂದ ಈ ಭಾಗದಲ್ಲಿ ವಾಸವಾಗಿದ್ದೇವೆ. ಈಗ ಅಧಿಕಾರಿಗಳು ಕಟ್ಟಡಗಳಿಗೆ ಮಾರ್ಕ್ ಮಾಡಿ ತೆರವು ಮಾಡುತ್ತಿದ್ದಾರೆ. ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದರೆ ಅಧಿಕಾರಿಗಳು ಹಳೆ ದಾಖಲೆ ಪರಿಶೀಲಿಸಿ ತೆರವುಗೊಳಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.