ಒತ್ತಾಯಪೂರ್ವಕ-ಕಿರುಕುಳದಿಂದ ಸಾಲ ವಸೂಲಾತಿ ಮಾಡದಿರಲು ಸೂಚನೆ

ವಿಜಯಪುರ, ಜೂ.3-ವಿಜಯಪುರ ಜಿಲ್ಲೆಯಲ್ಲಿ ಬರುವ ಸಹಕಾರಿ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳ ಸದಸ್ಯರ ಸಾಲ ವಸೂಲಾತಿ ಒತ್ತಾಯ ಪೂರ್ವದಿಂದ ಹಾಗೂ ಕಿರುಕುಳ ನೀಡುವ ಮೂಲಕ ಸಾಲ ವಸೂಲಾತಿ ಮಾಡುವದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಆದಕಾರಣ ಸಂಸ್ಥೆಯ ಸದಸ್ಯರಿಂದ ಸಾಲ ವಸೂಲಾತಿಯ ಹೆಸರಿನಲ್ಲಿ ಸಾರ್ವಜನಿಕ ಸದಸ್ಯರಿಗೆ ಕಿರುಕುಳ ನೀಡಬಾರದೆಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾದ್ಯಂತ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಇವರು ಕೋವಿಡ್-19 ಸಾಂಕ್ರಾಮಿಕ ರೋಗ ಸರಪಳಿ ತಡೆಗಟ್ಟಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ-1973 ಕಲಂ 144 ರ ಪ್ರಕಾರ ದಿನಾಂಕ:27-04 2021 ರಿಂದ ದಿನಾಂಕ:07-06-2021 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಜಿಲ್ಲೆಯಲ್ಲಿ ಕೋವಿಡ್-19 ಅಲೆ ನಿಯಂತ್ರಣ ಆಗುವವರೆಗೆ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳು, ಸಹಕಾರಿ ಹಾಗೂ ಸೌಹಾರ್ದ ಕಾನೂನು ಪ್ರಕಾರ ಸಾಲ ವಸೂಲಾತಿಗೆ ಕ್ರಮ ಜರುಗಿಸತಕ್ಕದ್ದು. ತಪ್ಪಿದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ರ ಪ್ರಕಾರ ನಿಷೇಧಾಜ್ಞೆ ಇರುವುದರಿಂದ ಸಾಲ ವಸೂಲಾತಿಯಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ತಿಳಿಸಲಾಗಿದೆ.
ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ನಿರ್ದೇಶನದ ಪ್ರಕಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಲಾಭದಲ್ಲಿರುವ ಸಂಸ್ಥೆಗಳ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟದಲ್ಲಿರುವ ಕಾರ್ಯಕರ್ತರಿಗೆ ಹಾಗೂ ತೊಂದರೆ ಇರುವ ಕುಟುಂಬದ ಸದಸ್ಯರಿಗೆ ದಿನಸಿ ವಸ್ತುಗಳು ತಮ್ಮ ಸಂಸ್ಥೆಯ ಕಾರ್ಯ ಕ್ಷೇತ್ರದಲ್ಲಿ ಬರುವ ಇಲಾಖೆ ಅಧಿಕಾರಿಗಳು ವಿತರಣೆ ಮಾಡಲು ಈ ಮೂಲಕ ಅವರು ಮನವಿ ಮಾಡಿದ್ದಾರೆ.