ಒತ್ತಡ ಹೇರಿಯಾದರೂ ಕೋವಿಡ್ ಲಸಿಕೆ ಹಾಕಿಸುತ್ತೇವೆ


ದಾವಣಗೆರೆ,ಡಿ.01: ಕೊರೊನಾ ರೂಪಾಂತರಿ ಅಲೆ ಓಮೈಕ್ರಾನ್‌ನಿಂದ ರಕ್ಷಣೆ ಪಡೆಯಬೇಕಾದರೆ, ಕೋವಿಡ್ ಲಸಿಕೆ ಪಡೆಯುವುದು ಅತ್ಯವಶ್ಯವಾಗಿದೆ. ಹೀಗಾಗಿ, ಲಸಿಕೆ ಪಡೆಯದವರ ಮನವೊಲಿಸಿ ವ್ಯಾಕ್ಸಿನ್ ಹಾಕಿಸಲಾಗುತ್ತಿದೆ. ಆಗಲೂ ಮೊಂಡತನ ಪ್ರದರ್ಶಿಸಿದರೆ ಒತ್ತಡ ಹೇರಿಯಾದರೂ ಲಸಿಕೆ ಹಾಕಿಸುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.ಕೋವಿಡ್ ಲಸಿಕೀಕರಣ ಕಡಿಮೆಯಾಗಿದ್ದ ಇಲ್ಲಿನ ಭಾಷಾ ನಗರದಲ್ಲಿ ಅಧಿಕಾರಿಗಳೊಂದಿಗೆ ಕೋವಿಡ್ ಲಸಿಕೆ ಅಭಿಯಾನ ನಡೆಸಿ, ಮನೆ, ಮನೆಗೆ ತೆರಳಿ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಕೊಡಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಶೇ.70 ರಷ್ಟು ಲಸಿಕೀಕರಣವಾಗಿದೆ. ಆದರೆ, ದಾವಣಗೆರೆಯ ಹಳೆ ಭಾಗದ ಭಾಷಾ ನಗರ, ಶಿವ ನಗರ, ಮೆಹಬೂಬ್ ನಗರ, ಆಜಾದ್ ನಗರ, ಅಹ್ಮದ್ ನಗರ ಸೇರಿದಂತೆ ಹಲವೆಡೆ ತಪ್ಪು ಕಲ್ಪನೆಯಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ತಪ್ಪು ಕಲ್ಪನೆಯನ್ನು ದೂರ ಮಾಡಿ, ಲಸಿಕೆಯಿಂದಾಗುವ ಉಪಯೋಗದ ಬಗ್ಗೆ ತಿಳಿಹೇಳಿ, ಮನೆ, ಮನೆಗೂ ತೆರಳಿ ವ್ಯಾಕ್ಸಿನ್ ಹಾಕಿಸಲಾಗುತ್ತಿದೆ. ಈಗ ನಿತ್ಯವೂ 30ರಿಂದ 35 ಸಾವಿರ ಡೋಸ್ ಲಸಿಕೆ ನೀಡುತ್ತಿದ್ದು, ಶುಕ್ರವಾರದ ವೇಳೆಗೆ ಗುರಿ ಮುಟ್ಟುತ್ತೇವೆ ಎಂದು ಹೇಳಿದರು.ಲಸಿಕೆ ಪಡೆಯದಿದ್ದರೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸರ್ಕಾರದಿಂದ ಅಧಿಕೃತವಾಗಿ ಆದೇಶ ಬಂದರೆ ಲಸಿಕೆ ಪಡೆಯದೇ ಇರುವವರ ಸೌಲಭ್ಯಗಳನ್ನು ಕಡಿತಗೊಳಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಳೆಗೆ 118 ಕೋಟಿ ನಷ್ಟ:ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 118 ಕೋಟಿ ರೂ. ಮೌಲ್ಯದ ಬೆಳೆ, ರಸ್ತೆ, ಸರ್ಕಾರಿ ಕಟ್ಟಡ, ಮನೆಗಳು ಸೇರಿದಂತೆ ಆಸ್ತಿ, ಪಾಸ್ತಿ ಹಾನಿಗೆ ಒಳಗಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರೆಗೆ 5.79 ಕೋಟಿ ರೂ.ಗಳ ಬೆಳೆ ಹಾನಿ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಒ ಡಾ.ನಾಗರಾಜ, ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಡಾ.ಮೀನಾಕ್ಷಿ, ಪಾಲಿಕೆಯ ಆರೋಗ್ಯ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.——-