ಒತ್ತಡ ಹಾಗೂ ಆತಂಕದ ಬದುಕಿಗೆ ಯೋಗವು ದಿವ್ಯ ಔಷಧಿ

ಕಲಬುರಗಿ:ಜೂ.21:ಇಂದಿನ ಮಾನಸಿಕ ಒತ್ತಡ ಹಾಗೂ ಆತಂಕದ ಬದುಕಿಗೆ ಯೋಗವು ದಿವ್ಯ ಔಷಧಿ. ಯೋಗದಿಂದ ನಮ್ಮ ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಅದರಲ್ಲೂ ವಿದ್ಯಾರ್ಥಿಗಳು ಕೆಲವು ಯೋಗಾಸನಗಳಿಂದ ಮನಸ್ಸಿನ ಏಕಾಗ್ರತೆಯನ್ನು ಸುಧಾರಿಸಿಕೊಂಡು ಓದಿನಲ್ಲಿ ಮುನ್ನಡೆ ಸಾಧಿಸಬಹುದು ಎಂದು ನರರೋಗ ತಜ್ಞ ಡಾ. ವಿನಯ ಶರ್ಮಾ ಅಭಿಪ್ರಾಯ ಪಟ್ಟರು.
ನಗರದ ರಾಮ ಮಂದಿರ ಹತ್ತಿರವಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ವಿನಯ ಶರ್ಮಾ ಯೋಗದಿಂದ ನಮಗೆ ನಾವೇ ಸ್ವಯಂ ಚಿಕಿತ್ಸೆಯನ್ನು ಪಡೆಯಬಹುದು. ಪ್ರತಿದಿನ ನಾವು 40 ರಿಂದ 50 ನಿಮಿಷ ಯೋಗಕ್ಕೆ ಸಮಯವನ್ನು ಮೀಸಲಿಟ್ಟರೆ, ಇಡೀ ದಿನ ನಾವು ಕ್ರಿಯಾಶೀಲರಾಗಿರಬಹುದು ಎಂದು ಹೇಳಿದರು.
ನಂತರ ಎಲ್ಲ ವಿದ್ಯಾರ್ಥಿಗಳು ಯೋಗ ಮತ್ತು ಆಸನವನ್ನು ಮಾಡಿದರು. ಮಕ್ಕಳಿಗೆ ದೈಹಿಕ ಶಿಕ್ಷಕರಾದ ಶ್ರೀಲತಾ, ಹಾಗೂ ಮೋನಪ್ಪ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಅಂಬಿಕಾ ರೆಡ್ಡಿ, ಶಿಕ್ಷಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.