ಒತ್ತಡ ಮುಕ್ತ ಕಲಿಕೆಗೆ ಪ್ರೇರಣೆ

ಕೋಲಾರ, ಜ.೨೧- ಮಕ್ಕಳಲ್ಲಿ ಭಾವೈಕ್ಯತೆ,ಪರಿಸರ ಜ್ಞಾನ, ಜೀವನ ಕೌಶಲ್ಯಗಳನ್ನು ಒತ್ತಡ ಮುಕ್ತವಾಗಿ ಸಂಭ್ರಮದಿಂದ ಕಲಿಯುವಂತೆ ಪ್ರೇರಣೆ ನೀಡಿ ನವಚೈತನ್ಯ ತುಂಬುವಂತೆ ಮಾಡುವುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಶ್ನೆಯೂ ಪ್ರಜ್ಞೆಯಾಗಿರಲಿ’ ಎಂಬ ಧ್ಯೇಯದೊಂದಿಗೆ ನಡೆದ ತಾಲ್ಲೂಕು ಮಟ್ಟದ ಕ್ಲಸ್ಟರ್ ವ್ಯಾಪ್ತಿಯ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಬ್ಬಕ್ಕೆ ಹೊಸ ಬಟ್ಟೆ,ಸಿಹಿ ತಿನಿಸು, ಸಂಭ್ರಮ,ಸಡಗರ ಕಾಣುತ್ತೇವೆ ಅದೇ ರೀತಿ ಕಲಿಕೆಯಲ್ಲೂ ಮಕ್ಕಳು ಭಾಗವಹಿಸಲು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದ ಅವರು, ಕೋವಿಡ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಆದ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಸರ್ಕಾರ ಜಾರಿಗೆ ತಂದ ‘ಕಲಿಕಾ ಚೇತರಿಕೆ’ಯ ಭಾಗವೇ ಕಲಿಕಾ ಹಬ್ಬವಾಗಿದೆ ಎಂದರು.
ತರಗತಿ ಕೋಣೆಯಲ್ಲೂ ಹಬ್ಬದ ವಾತಾವರಣದಲ್ಲಿ ಪ್ರತಿದಿನ ಮಕ್ಕಳು ಕಲಿಯುವಂತೆ ಮಾಡಿದ್ದೇವೆ ಎಂಬ ಸಂದೇಶವನ್ನು ಸಮುದಾಯಕ್ಕೆ ತಲುಪಿಸೋಣ, ಒತ್ತಡದ ಕಲಿಕೆ ಬೇಡ ಸಂತಸದ ಕಲಿಕೆ ಬೇಕು ಎಂಬುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ತಾಲ್ಲೂಕಿನ ೮ ಕ್ಲಸ್ಟರ್‌ಗಳಲ್ಲಿ ಏಕಕಾಲದಲ್ಲಿ ಕಲಿಕಾ ಹಬ್ಬ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ ಎಂದರು.
ಸರ್ಕಾರಿ ಶಾಲೆಗಳು, ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ, ನಾವೂ ಶೈಕ್ಷಣಿಕ ಪ್ರಗತ ಸಾಧಿಸುತ್ತಿದ್ದೇವೆ ಎಂದ ಅವರು, ಮಕ್ಕಳು ಚಟುವಟಿಕೆಗಳ ಮೂಲಕ ಸಂಭ್ರಮದಿಂದ ಕಲಿಯುವಂತೆ ಮಾಡಬೇಕಿದೆ ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಕಲಿಕಾ ಹಬ್ಬಕ್ಕೆ ಅರಾಭಿಕೊತ್ತನೂರು ಕ್ಲಸ್ಟರ್‌ನ ೧೩ ಶಾಲೆಗಳ ಮಕ್ಕಳು ಬಂದಿದ್ದಾರೆ, ಇದು ನಮ್ಮ ಮನೆಯಲ್ಲಿ ಮಾಡುವ ಹಬ್ಬ, ನಮ್ಮೂರ ಹಬ್ಬಕ್ಕಿಂತ ಹೆಚ್ಚಿನ ಸಂಭ್ರಮ ಇಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿ, ಎಲ್ಲಾ ಮಕ್ಕಳಿಗೂ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಮಕ್ಕಳಲ್ಲಿ ಕಲಿಕೆಗೆ ಪ್ರೇರಣೆ ನೀಡುವ ಮೂಲಕ ಕಲಿಸುವುದನ್ನು ಸಂಭ್ರಮದಿಂದ ಮಾಡಬಹುದು ಎಂಬುದನ್ನು ಈ ಹಬ್ಬ ಸಾಕ್ಷೀಕರಿಸುತ್ತಿದೆ, ಮಕ್ಕಳು ಅತ್ಯಂತ ಸಡಗರದಿಂದ ಪಾಲ್ಗೊಂಡಿದ್ದಾರೆ, ಮಕ್ಕಳಲ್ಲಿ ಜೀವನ ಕೌಶಲ್ಯ ತುಂಬುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಆರ್‌ಪಿ ರಶ್ಮಿ, ಸಂಪನ್ಮೂಲ ವ್ಯಕ್ತಿ ವೆಂಕಟರೆಡ್ಡಿ,ಶಿಕ್ಷಕರಾದ ಗೋಪಾಲಕೃಷ್ಣ,ಶ್ವೇತಾ,ಸುಗುಣಾ,ಫರೀದಾ,ಲೀಲಾ,ಶ್ರೀನಿವಾಸಲು, ಚೈತ್ರಾ,ವಿವಿಧ ಶಾಲೆಗಳ ಶಿಕ್ಷಕರಾದ ಇಬ್ರಾಹಿಂ, ಪುಷ್ಪಾ, ನಾರಾಯಣಸ್ವಾಮಿ, ರಮೇಶ್, ಶಿಲ್ಪಾ, ಪದ್ಮಾವತಿ, ಎನ್.ನಾರಾಯಣಸ್ವಾಮಿ, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.