‘ಒತ್ತಡ ಮತ್ತು ಬಿಕ್ಕಟ್ಟು ನಿರ್ವಹಣೆ ಹಾಗೂ ಕ್ರಿಯಾಶೀಲ ಜೀವನಶೈಲಿ ಅಳವಡಿಕೆ’ ಕುರಿತು ಕಾರ್ಯಾಗಾರ

ಕಲಬುರಗಿ:ಮಾ.3: ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ‘ಒತ್ತಡ ಮತ್ತು ಬಿಕ್ಕಟ್ಟು ನಿರ್ವಹಣೆ ಹಾಗೂ ಕ್ರಿಯಾಶೀಲ ಜೀವನಶೈಲಿ ಅಳವಡಿಕೆ’ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿಜಯೇಂದ್ರ ಪಾಂಡೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ, ಒತ್ತಡ ಎನ್ನುವುದು ಬದುಕಿನ ಯಾವುದೇ ಹಂತದಲ್ಲಿ ನಮ್ಮನ್ನು ಕಾಡಬಹುದಾದರೂ, ಅದನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ನಮ್ಮ ಯಶಸ್ಸು ಅಡಗಿದೆ ಎಂದರು.
ಒಂದು ಕ್ಷೇತ್ರದಲ್ಲಿ ಮಹತ್ವದ ಸಾಧನೆ ಸಾಧ್ಯವಾಗಬೇಕಾದರೆ ಆ ನಿಟ್ಟಿನಲ್ಲಿ ಪೂರಕವಾದ ಕೌಶಲಗಳನ್ನು ರೂಢಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಮ್ಮಲ್ಲಿ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಸಕಾರಾತ್ಮಕ ಕೌಶಲ ಹೆಚ್ಚಾದಂತೆಲ್ಲಾ ನಮ್ಮೊಳಗಿನ ಆತ್ಮವಿಶ್ವಾಸ ದಿನೇದಿನೆ ಪಕ್ವಗೊಳ್ಳುತ್ತಾ ಹೋಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗುವುದಷ್ಟೇ ಅಲ್ಲ; ಬಿಕ್ಕಟ್ಟು ಸೃಷ್ಟಿಯಾದ ಸಂದರ್ಭದಲ್ಲಿ ನಮ್ಮೊಳಗಿನ ಕೌಶಲ ಸಕಾರಾತ್ಮಕ ಪರಿಹಾರಕ್ಕೂ ದಾರಿ ಹುಡುಕುತ್ತದೆ ಎಂದು ನುಡಿದರು.
ವಿದ್ಯಾರ್ಥಿ ಬದುಕಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬ ಧಾವಂತ ಒತ್ತಡಕ್ಕೆ ಕಾರಣವಾಗುತ್ತಿದೆ. ಮೇಲಾಗಿ, ಪೋಷಕರು ತಮ್ಮ ಮಕ್ಕಳು ಶತಾಯಗತಾಯ ಉತ್ತಮ ಅಂಕಗಳನ್ನು ಗಳಿಸಲೇಬೇಕೆಂಬ ಒತ್ತಡದ ವಾತಾವರಣ ಮನೆಯಲ್ಲಿ ಸೃಷ್ಟಿಸುವುದರಿಂದ ಮಕ್ಕಳು ಮಾನಸಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಹ್ಲಾದಕರ ವಾತಾವರಣದಲ್ಲಿ ಮಾತ್ರ ನಮ್ಮ ಮನಸ್ಸು ಚೇತೋಹಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಮನಗಾಣಬೇಕಿದೆ ಎಂದು ಕಿವಿಮಾತು ಹೇಳಿದರು.
ಸಿಯುಕೆ ಮನೋವಿಜ್ಞಾನ ವಿಭಾಗದ ಪ್ರೊ.ರೊಮೆಟ್ ಜಾನ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವೇಕಾನಂದ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಎಸ್.ಭಗವತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ನಿರ್ದೇಶಕಿ ಸುಮಾ ಭಗವತಿ ವೇದಿಕೆಯಲ್ಲಿದ್ದರು.

ಮುಖ್ಯಗುರು ಅಂಬಿಕಾರೆಡ್ಡಿ ಸ್ವಾಗತಿಸಿದರು. ಶಿಕ್ಷಕಿಯರಾದ ಮಧುಮತಿ ಗದ್ವಾಲ್ ನಿರೂಪಿಸಿದರೆ, ಶೀಬಾ ಸ್ಯಾಮ್ಸನ್ ವಂದಿಸಿದರು.

ಶಿಕ್ಷಕರಿಗೂ ಆಪ್ತ ಸಲಹೆ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಮನೋವಿಜ್ಞಾನ ವಿಭಾಗದ 80 ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು 7ರಿಂದ 9ನೇ ತರಗತಿವರೆಗಿನ 20 ವಿದ್ಯಾರ್ಥಿಗಳನ್ನು ಒಳಗೊಂಡ 18 ತಂಡಗಳಿಗೆ ತರಬೇತಿ ನೀಡಿದರು. ಇದರ ಜೊತೆಗೆ, ಸಿಯುಕೆ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿಜಯೇಂದ್ರ ಪಾಂಡೆ ಹಾಗೂ ಪ್ರೊ.ರೋಮೆಟ್ ಜಾನ್ ಅವರು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರಿಗೆ ಪ್ರತ್ಯೇಕವಾಗಿ ಒತ್ತಡ ನಿರ್ವಹಣೆ, ಬಿಕ್ಕಟ್ಟು ನಿಭಾವಣೆ ಕುರಿತು ತರಬೇತಿಯೊಂದಿಗೆ ಕೌನ್ಸೆಲಿಂಗ್ ನಡೆಸಿಕೊಟ್ಟರು.