ಒತ್ತಡ ನಿರ್ವಹಣೆಯಿಂದ ಕಾರ್ಯಕ್ಷಮತೆ ಹೆಚ್ಚಳ : ರಾಮನಗೌಡರ

ಹುಬ್ಬಳ್ಳಿ, ನ 15: ಇಂದಿನ ಧಾವಂತದ ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಮನಸ್ಸನ್ನು ಪುನಶ್ಚೇತನಗೊಳಿಸಿ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕಾರ್ಯಕ್ಷಮತೆ ಹೆಚ್ಚಿಸಲು ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅಭಿಪ್ರಾಯಪಟ್ಟರು.

ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಇನ್ನರ್ ವೀಲ್ ಕ್ಲಬ್ ಪಶ್ಚಿಮ ಶಾಖೆ ಹಾಗೂ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸಹಯೋಗದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ನ.11 ರಿಂದ 13 ರವರೆಗೆ ಆಯೋಜಿಸಿದ್ದ ಒತ್ತಡ ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಆಚಾರ ವಿಚಾರಗಳಿಂದಾಗಿ ಎಲ್ಲರೂ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಕೋವಿಡ್ ನಂತರದಲ್ಲಿ ಇದಕ್ಕೆ ಆರ್ಥಿಕ ಒತ್ತಡವೂ ಸೇರಿಕೊಂಡಿದೆ. ಧ್ಯಾನ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳಿಂದ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕಾರ್ಯಕ್ಷಮತೆ ವೃದ್ಧಿಸುತ್ತದೆ. ಇದರಿಂದ ಸಂಸ್ಥೆಯ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಇನ್ನರ್ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯು ಸಾರಿಗೆ ಸಂಸ್ಥೆಯ ಪ್ರಯಾಣಿಕ ಸ್ನೇಹಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಇನ್ಸ್ಟಿಟ್ಯೂಟ್ ಆಫ್ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸಿಸ್ಟರ್ ಸುಜಾತಾ ನವಲೆ ಮನಸ್ಸಿನ ಸ್ಥಿರೀಕರಣ, ಏಕಾಗ್ರತೆ, ಆಂತರಿಕ ಶುದ್ದೀಕರಣ, ಮನೋ ಪುನಶ್ಚೇತನ ಹಾಗೂ ಧ್ಯಾನ ಕುರಿತು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಿಸ್ಟರ್ ಸುಜಾತ ನವಲೆ ಮತನಾಡಿ ನಮ್ಮ ಮನಸ್ಸು ಮೊಬೈಲ್ ಫೆÇೀನ್‍ನ ಮೆಮೊರಿ ಇದ್ದಂತೆ. ನಾವು ಏನನ್ನು ಯೋಚಿಸುತ್ತೇವೋ ಅದನ್ನೇ ಶೇಖರಿಸಿಟ್ಟುಕೊಳ್ಳುತ್ತದೆ. ಬೇಕಿಲ್ಲದ ವಿಚಾರಗಳನ್ನೇ ತುಂಬಿ ಕೊಂಡರೆ ಒಳ್ಳೆಯ ವಿಚಾರಗಳಿಗೆ ಜಾಗವಿಲ್ಲದೆ ಒತ್ತಡಕ್ಕೆ ಕಾರಣವಾಗುತ್ತದೆ. ಇದು ಹಲವಾರು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಧ್ಯಾನದ ಮೂಲಕ ಆಗಾಗ ಮನಸ್ಸಿನ ಮೆಮೊರಿಯನ್ನು ಸ್ವಚ್ಚಗೊಳಿಸಿದಾಗ ಮನಸ್ಸು ಪುನಶ್ಚೇತನಗೊಂಡು ಮತ್ತೆ ಮೊದಲಿನಂತೆ ಕ್ರೀಯಾಶೀಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಉಚಿತವಾಗಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಬಿ.ಆರ್. ಬಾರಕೋಲ ಅವರನ್ನು ಮೊ.ಸಂ.9880082625 ಅಥವ ಅಜಿತ ಕಾಮತ ಅವರನ್ನು ಮೊ.ಸಂ.9448489478 ಸಂಪರ್ಕಿಸಬಹುದು ಎಂದು ಹೇಳಿದರು.

ಇನ್ನರ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಗದ್ವಾಲ ಮಾತನಾಡಿ ಪ್ರಯಾಣಿಕ ಸ್ನೇಹಿ ಮತ್ತು ಸಾರಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರ ಭಾಗವಾಗಿ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಗೋಕುಲ ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 120 ನೌಕರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇನ್ನರ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ಕಾರ್ಯದರ್ಶಿ ಪೂರ್ಣಿಮ ಕದಂಬಿ, ಶ್ರೀರಾಮಚಂದ್ರ ಮಿಶನ್‍ನ ಹಿರಿಯ ತರಬೇತುದಾರ ರಮೇಶ ಪಟೇಲ್, ಸಿಸ್ಟರ್ ಸುನಿತಾ ಲಿಂಬಿಕಾಯಿ, ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್. ಮುಜುಂದಾರ, ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರವೀಣ ಈಡೂರ ಮತ್ತಿತರರು ಇದ್ದರು.