ಒತ್ತಡದ ವೃತ್ತಿ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ :ಡಾ.ಸಂಪತ್ ಗುಣಾರಿ ಸಲಹೆ

ವಿಜಯಪುರ:ಮಾ.5: ಒತ್ತಡದ ವೃತ್ತಿ ಬದುಕಿನ ಮಧ್ಯ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಸಂಪತ್ ಗುಣಾರಿ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಸಭಾಂಗಣದಲ್ಲಿ, ಮಾಧ್ಯಮವರಿಗೆ ಹಮ್ಮಿಕೊಂಡ, ಆರೋಗ್ಯ ಕಾರ್ಯಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಆರೋಗ್ಯ ಹೊಂದಿದರೆ ಮಾತ್ರ ಎಲ್ಲವನ್ನು ಜಯಿಸಬಹುದು. ದಿನನಿತ್ಯ ಜೀವನದ ಒತ್ತಡದ ವೃತ್ತಿ ಬದುಕಿನಲ್ಲಿ ಸಮಯವನ್ನು ಮೀಸಲಿರಿಸಿ ಆರೋಗ್ಯದ ಕುರಿತು ಗಮನ ಹರಿಸಬೇಕು. ಮಾಧ್ಯಮ ಕ್ಷೇತ್ರದಲ್ಲಿ ಹಲವು ಸಂದರ್ಭಗಳಲ್ಲಿ ಒತ್ತಡಗಳು ಎದುರಾಗುತ್ತವೆ. ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ಅನಿರ್ವಾಯತೆಯೂ ಎದುರಾಗಲಿರುವುದರಿಂದ ಆರೋಗ್ಯವನ್ನು ನಿರ್ಲಕ್ಷಿಸದೇ, ಮಾಧ್ಯಮ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರು ತಮ್ಮ ಹಿತರಕ್ಷಣೆಗೆ ಒತ್ತು ನೀಡಿ, ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಉಚಿತ ಆರೋಗ್ಯ ತಪಾಸಣೆಯನ್ನು ಹೊಸದಾಗಿ ಆಯುಷ್ಮಾನ್ ಭಾರತ ಪ್ರಾಧನಮಂತ್ರಿ ಯೋಜನೆ ಆರೋಗ್ಯ ಕರ್ನಾಟಕ ಎಂದು ಮರುರೂಪಿಸಿದೆ. ನಮ್ಮ ಜಿಲ್ಲೆ ಸೇರಿಸಿ ಕಾಮನ್ ಸರ್ವಿಸ್ ಸೆಂಟರ್‍ಗಳನ್ನು ಪ್ರತಿ ಹಳ್ಳಿಗಳಲ್ಲಿ ಸ್ಥಾಪಿಸಿದ್ದು, ನೇರವಾಗಿ ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಪ್ರತಿ ಜಿಲ್ಲೆಗೆ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ತಾಲೂಕುವಾರು ಮಾರ್ಗಸೂಚಿ ನೀಡಲು ಸೂಚಿಸಲಾಗಿದ್ದು, ತಮ್ಮ ಮೂಲ ದಾಖಲೆಗಳನ್ನು ಒದಗಿಸಿ ಗ್ರಾಮ ಒನ್ ಯೋಜನೆ ಅಡಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕವಿತಾ ದೊಡಮನಿ ಅವರು ಮಾತನಾಡಿ, ಜನಸಾಮಾನ್ಯರ ಆರೋಗ್ಯ ಕಾಪಾಡಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಯೋಜನೆ ಮಾಹಿತಿ ಜನರಿಗೆ ತಲುಪಿಸಲು ಮಾಧ್ಯಮದವರ ಪಾತ್ರ ಅತಿ ಮುಖ್ಯವಾಗಿದೆ. ದೀರ್ಘಾವಧಿ ಮತ್ತು ಅಲ್ಪಾವಧಿ ರೋಗಗಳ ಕುರಿತು ವಿವರಣೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಚೂರಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುರೇಶ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.