
ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.10: ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ಪತ್ರಕರ್ತರು ಗಮನ ಹರಿಸುವುದು ಇಂದಿನ ಅನಿವಾರ್ಯ ಎಂದು ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್. ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಿಜಯನಗರ ಜಿಲ್ಲಾ ಘಟಕ ಹಾಗೂ ದಾವಣಗೆರೆಯ ಎಸ್ ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇದರ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ವಾಕಿಂಗ್, ವ್ಯಾಯಮಗಳಿಂದ ಹೃದಯ ಸಂಬಂಧಿ ರೋಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕಾಗ್ರತೆ, ಸಮಚಿತ್ತಭಾವ, ಯಾವುದೇ ಯೋಚನೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳವುದನ್ನು ಮೈಗೂಡಿಸಿಕೊಂಡಾಗ ಮಾತ್ರ ಹೃದಯ ರೋಗದಿಂದ ದೂರ ಉಳಿಯಬಹುದು. ನಾವು ನಿತ್ಯ ವಾಕಿಂಗ್, ವ್ಯಾಯಾಮ ಮಾಡುತ್ತೇವೆ. ಇದರಿಂದ ಆರೋಗ್ಯವಾಗಿ ಇದ್ದೇವೆ ಎಂದು ಮೈಮರೆಯುವುದಲ್ಲ. ನಾವು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಬೇಕು. ಈ ನಿಟ್ಟಿನಲ್ಲಿ ಕಾನಿಪ ವಿಜಯನಗರ ಜಿಲ್ಲಾ ಘಟಕ, ನಿಜಕ್ಕೂ ಉತ್ತಮ ಕಾರ್ಯ ಮಾಡಿದೆ. ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗಕ್ಕೆ ಹೃದಯ ತಪಾಸಣೆ ಶಿಬಿರ ಆಯೋಜಿಸಿರುವುದು ಔಚಿತಪೂರ್ಣವಾಗಿದೆ ಎಂದು ಪ್ರಶಂಸಿದರು.
ಜಿಪಂ ಸಿಇಓ ಸದಾ ಶಿವಪ್ರಭು ಮಾತನಾಡಿ, ಇಂದಿನ ಬದಲಾದ ಜೀವನ ಶೈಲಿ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ರಾತ್ರಿ ಮಲಗುವ ವೇಳೆಯಲ್ಲಿ ಬೆಳಿಗ್ಗೆ ವಾಕಿಂಗ್, ವ್ಯಾಯಮ ಮಾಡಿಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮಲಗಿರುತ್ತೇವೆ. ಬೆಳಿಗ್ಗೆ ಕೆಲಸದ ಒತ್ತಡದಲ್ಲಿ ಕೈ ಬಿಡುತ್ತೇವೆ. ಇತಂಹ ಪರಿಸ್ಥಿತಿಯಲ್ಲಿ ಆರೋಗ್ಯಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವುದು ಪ್ರತಿಯೊಬ್ಬರಿಗೆ ಅನಿವಾರ್ಯವಾಗಿದೆ ಎಂದರು.
ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಪತ್ರಕರ್ತರ ಆರೋಗ್ಯಕ್ಕಾಗಿ ಕಾನಿಪ ವಿಜಯನಗರ ಜಿಲ್ಲಾ ಘಟಕ ಅತೀವ ಕಾಳಜಿ ಹೊಂದಿದೆ. ಕಳೆದ ಎರಡು ವರ್ಷದಲ್ಲಿ ಸಂಘದ ನೂರಾರು ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದೆ. ಕೆಲ ಮಿತ್ರರು ವಿಮೆ ಲಾಭವನ್ನು ಈಗಾಗಲೇ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಸಹ ಹೃದಯ ತಪಾಸಣೆ ಶಿಬಿರ ಆಯೋಜನೆ ಚಿಂತನೆ ನಡೆಸಿದೆ. ಇದಕ್ಕೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಇತಂಹ ಪರಿಸ್ಥಿತಿಯಲ್ಲಿ ಪತ್ರಕರ್ತರು ಹೃದಯ ತಪಾಸಣೆ ಒಳಪಡಿಸಬೇಕು ಎಂದು ಕಾನಿಕ ಜಿಲ್ಲಾ ಘಟಕ ಚಿಂತನೆ ನಡೆಸಿ, ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್, ಸಹಯೋಗದಲ್ಲಿ ಹೃದಯ ತಪಾಸಣೆ ಶಿಬಿರ ಆಯೋಜಿಸಿದೆ. ಇದರ ಲಾಭ ಪಡೆಯಬೇಕು ಎಂದು ಕೋರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‍ನ ಸೀನಿಯರ್ ಎಕ್ಸಿಕ್ಯೂಟಿವ್ ಪ್ರಸನ್ನ ಕುಮಾರ್ ಎ.ಪಿ ಮಾತನಾಡಿದರು. ಹಿರಿಯ ಪತ್ರಕರ್ತ ಕೃಷ್ಣ ಲಮಾಣಿ ಸ್ವಾಗತಿಸಿದರು. ಕಿಚಿಡಿ ಕೊಟ್ರೇಶ್ ವಂದಿಸಿದರು. ಆರಂಭದಲ್ಲಿ ಆಕಾಶವಾಣಿ ವರದಿಗಾರರಾದ ಪೂರ್ಣಿಮಾ ಪ್ರಾರ್ಥಿಸಿದರು. ಸಂಘದ ಖಜಾಂಚಿ ಅನೂಪ್ ಕುಮಾರ್, ಉಪಾಧ್ಯಕ್ಷರಾದ ಬುಡ್ಡಿ ಬಸವರಾಜ, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸ, ಇಂದಿರ ಕಲಾಲ್, ಭೀಮನಾಯ್ಕ, ಅನಂತ ಪದ್ಮನಾಭ ರಾವ್, ಭೀಮರಾಜ್, ಸಂಜಯ್ ಕುಮಾರ್, ಬಾಬು ಕುಮಾರ್, ಸ್ವಾತಂತ್ರ್ಯ ಹೋರಾಟ ಪತ್ರಿಕೆ ಸಂಪಾದಕ ಎಸ್.ಎಂ.ಮನೋಹರ್, ಹೊಸಪೇಟೆ ಟೈಮ್ಸ್ ಸಂಪಾದಕಿ ಎಸ್.ಎಂ. ರೇಖಾ ಪ್ರಕಾಶ್, ಪತ್ರಕರ್ತರಾದ ಎಚ್.ವೆಂಕಟೇಶ್, ಜಯಪ್ಪ ರಥೋಡ್, ಸುರೇಶ್ ಚವ್ಹಾಣ್, ಮಂಜುನಾಥ ಹಿರೇಮಠ, ಪಾಂಡುರಂಗ, ಕೆ.ಬಿ.ಖಾವಸ್, ಕಾಕುಬಾಳು ವೀರಭದ್ರಪ್ಪ ಇತರರು ಇದ್ದರು. ನೂರಕ್ಕೂ ಹೆಚ್ಚು ಜನ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರು, ಶಿಬಿರದ ಲಾಭ ಪಡೆದರು.