ಒತ್ತಡದ ಜೀವನ ಶೈಲಿಗೆ ಯೋಗ ರಾಮಬಾಣ

ಸಿರವಾರ,ಜೂ.೨೧-
ಆರೋಗ್ಯ ಮತ್ತು ಮನಸ್ಸಿನ ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ ಎಂದು ತಹಶಿಲ್ದಾರ ಸುರೇಶ ವರ್ಮಾ ಅಭಿಪ್ರಾಯಪಟ್ಟರು.
ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ, ನಮ್ಮ ಕ್ಲಿನಿಕ್ ಸಿರವಾರ, ಶಿಕ್ಷಣ ಇಲಾಖೆ, ಆಯೂಷ್ ಫೆಡರೇಷನ್ ಆಫ್ ಇಂಡಿಯಾ ಸಿರವಾರ ತಾಲೂಕು ಘಟಕ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೯ ನೇ ’ವಿಶ್ವ ಯೋಗ ದಿನಾಚರಣೆ’ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಯೋಗ ದಿನಾಚರಣೆಯಿಂದ ಜಗತ್ತಿನೆಲ್ಲೆಡೆ ಆರೋಗ್ಯ ಪ್ರಜ್ಞೆ ಜಾಗೃತಗೊಂಡಿದೆ. ಇಂದಿನ ಒತ್ತಡದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆಗೆ ಸಹಾಯಕ. ವಿಶ್ವಕ್ಕೆ ಯೋಗದಂತಹ ವೈಜ್ಞಾನಿಕ ಕೊಡುಗೆಯನ್ನು ನಮ್ಮ ಭಾರತ ದೇಶ ಕೊಟ್ಟಿದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಷಯ ಎಂದರು.
ಆಯೂಷ್ ವೈದ್ಯ ಡಾ.ನಾಗೇಶ್ ಶ್ಯಾವಿ ಅವರ ಮಾರ್ಗದರ್ಶನದಲ್ಲಿ ಯೋಗಾಸನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಲಾಯಿತು.
ಈ ವೇಳೆ ಆರೋಗ್ಯಾಧಿಕಾರಿ ಡಾ.ಪರಿಮಳಾ ಮೈತ್ರಿ, ಸಿಡಿಪಿಒ ನಾಗರತ್ನ, ಡಾ.ಸುನೀಲ್ ಸರೋದೆ, ಮುಖಂಡರಾದ ಅರಿಕೇರಿ ಮಲ್ಲಿಕಾರ್ಜುನ ಸಾಹುಕಾರ,ಪಟ್ಟಣ ಪಂಚಾಯತ್ ಸದಸ್ಯ ಸಂದೀಪ್ ಪಾಟೀಲ್, ಹಾಗು ಕಸಾಪ ದ ಅಧ್ಯಕ್ಷ ಹಾಗು ಹಿರಿಯ ವರದಿಗಾರ ಸುರೇಶ್ ಹೀರಾ, ಶ್ರೀಧರ್ ಸ್ವಾಮಿ, ವಸತಿ ಶಾಲೆಯ ಪ್ರಾಚಾರ್ಯರು, ಶಿಕ್ಷಕರು, ಆರೋಗ್ಯ ಇಲಾಖೆಯ ಶರಣಬಸವ, ಶ್ರೀದೇವಿ, ಹಾಗು ವಿದ್ಯಾರ್ಥಿನಿಯರು ಇದ್ದರು.