ಒತ್ತಡಕ್ಕೆ ಮಣಿದ ಹರಿಯಾಣ ಸರ್ಕಾರ ರೈತ ಪ್ರತಿಭಟನೆ ಅಂತ್ಯ


ನವದೆಹಲಿ,ಜೂ.೧೪- ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹರಿಯಾಣದ ಪಿಪ್ಲಿಯಲ್ಲಿ ೨೪ ಗಂಟೆಗಳ ಹೆದ್ದಾರಿ ಬಂದ್ ನಡೆಸಿದ್ದ ರೈತರ ಬೇಡಿಕೆಗೆ ಸರ್ಕಾರ ಮಣಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲು ರೈತನಾಯಕರು ಸಮ್ಮತಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಕೆಯು ರೈತ ನಾಯಕ ರಾಕೇಶ್ ಟಿಕಾಯತ್ ಅವರು, ಸೂರ್ಯಕಾಂತಿ ಬೀಜ ಖರೀದಿ ದರ ಹೆಚ್ಚಿಸಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ರೈತರು ಕುರುಕ್ಷೇತ್ರದಲ್ಲಿ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದೇವೆ ಎಂದಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ನೀಡಲು ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಹೆದ್ದಾರಿ ಬಂದ್ ತೆರವು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ದೇಶಾದ್ಯಂತ ಹೋರಾಟ ಮುಂದುವರಿಯಲಿದೆ, ರೈತ ನಾಯಕರನ್ನು ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣ ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.

ಸೂರ್ಯಕಾಂತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಮತ್ತು ಕಳೆದ ವಾರ ಶಹಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧಿತರಾದ ಒಂಬತ್ತು ರೈತ ಸಂಘದ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ನೂರಾರು ರೈತರು ಪಿಪ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ-೪೪ ಅನ್ನು ತಡೆದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಕೇಶ್ ಟಿಕಾಯತ್, ಸೂರ್ಯಕಾಂತಿ ಬೆಳೆಗೆ ಸರ್ಕಾರ ಎಂಎಸ್‌ಪಿ ಘೋಷಿಸುವವರೆಗೆ ರೈತರು ಕುರುಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದ್ದಾರೆ.ಸ್ಥಳೀಯ ಆಡಳಿತ ಮತ್ತು ಸರಕಾರ ರೈತ ಸಂಘಗಳ ಹೆಸರನ್ನು ಹಾಳು ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ಬೇಡಿಕೆಯನ್ನು ಕ್ವಿಂಟಲ್‌ಗೆ ೬,೪೦೦ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅದನ್ನು ಹರಿಯಾಣದಲ್ಲಿ ಏಕೆ ನಿರಾಕರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಹೆದ್ದಾರಿ ಬಂದ್ ದಿಗ್ಬಂಧನ ಹಿಂತೆಗೆದುಕೊಳ್ಳುವಂತೆ ರೈತರ ಮನವೊಲಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ ಮತ್ತು ಪರಿಹಾರ ಕಂಡುಕೊಳ್ಳುವ ಭರವಸೆ ಇದೆ ಎಂದು ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ತಿಳಿಸಿದ್ದಾರೆ.