ಒತ್ತಡಕ್ಕೆ ಮಣಿದು ಎಕ್ಸ್‌ಪ್ರೆಸ್ ವೇ ಟೋಲ್ ದರ ವಾಪಸ್

ಬೆಂಗಳೂರು, ಏ.೧- ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಲ್ಲಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನ ಟೋಲ್ ದರ ಹೆಚ್ಚಳವನ್ನು ಒಂದೇ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ಸು ಪಡೆದಿದ್ದು, ಇದರಿಂದ ಕೆಲಕಾಲ ವಾಹನ ಸವಾರರು ನಿಟ್ಟುಸಿರು ಬಿಟ್ಟಂತೆ ಆಗಿದೆ.
ನಿನ್ನೆಯಷ್ಟೇ ಟೋಲ್ ದುಪ್ಪಟ್ಟು ದರ ಪ್ರಕಟಿಸಿದ್ದ ಪ್ರಾಧಿಕಾರದ ಇಂದಿನಿಂದ (ಏ.೧). ಹೆಚ್ಚುವರಿ ಹಣ ಪಾವತಿಗೆ ಸೂಚಿಸಿತ್ತು. ಆದರೆ, ಇದಕ್ಕೆ ಭಾರೀ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಜತೆಗೆ ಚುನಾವಣೆ ಹಿನ್ನೆಲೆಯೂ ಸರ್ಕಾರಕ್ಕೆ ಬಿಸಿ ತಟ್ಟಲಿದೆ. ಹೀಗಾಗಿ, ಟೋಲ್ ದರ ಹೆಚ್ಚಳ ಆದೇಶವನ್ನು ಒಂದೇ ದಿನದಲ್ಲಿ ವಾಪಸ್ ಪ್ರಾಧಿಕಾರ ವಾಪಸ್ ಪಡೆದಿದೆ.
ಮಾ. ೧೪ರಿಂದ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭ ಆಗಿದ್ದು, ಎರಡು ವಾರದಲ್ಲೇ ಹೆದ್ದಾರಿ ಟೋಲ್ ದರವನ್ನು ಶೇ ೨೨ ರಷ್ಟು ಹೆಚ್ಚಳ ಮಾಡಿ ಪ್ರಾಧಿಕಾರವು ಆದೇಶ ಹೊರಡಿಸಿತ್ತು. ಆದರೆ, ಟೋಲ್ ದರ ಏರಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ನಿನ್ನೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ, ಮಾ.೧೪ನೇ ತಾರೀಖು ಟೋಲ್ ದರ ಹೆಚ್ಚಳ ಮಾಡಿದಾಗ ಬೆಂಗಳೂರಿನಿಂದ ನಿಡಘಟ್ಟ ೧೩೫ ರೂಪಾಯಿ ಟೋಲ್ ದರ ನಿಗದಿಪಡಿಸಿದ್ದು. ಅದನ್ನು ಇಂದಿನಿಂದ ಅನ್ವಯವಾಗುವ ರೀತಿಯಲ್ಲಿ ೧೬೫ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.ಇಡೀ ದೇಶಾದ್ಯಂತ ಇರುವ ಎಲ್ಲ ಟೋಲ್ ರಸ್ತೆಗಳಲ್ಲಿ ಶೇಕಡಾ ೭ರಿಂದ ಒಂದಷ್ಟು ನಿಖರ ಬೆಲೆಯವರೆಗೆ ಹೆಚ್ಚಳ ಮಾಡಲಾಗಿದೆ. ಇದು ಕೇವಲ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇಗೆ ಮಾತ್ರ ಅನ್ವಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಆದರೆ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಇನ್ನೂ ಕೆಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಎಕ್ಸ್ ಪ್ರೆಸ್ ವೇಗೆ ಟೋಲ್ ದರ ಹೆಚ್ಚಳವಾಗುವುದು ಬೇಡ, ತಾತ್ಕಾಲಿಕವಾಗಿ ತಡೆಹಿಡಿಯಿರಿ ಎಂದು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೆ ಎಂದಿದ್ದರು.
ಆಕ್ರೋಶ:ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್ ವೇ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲಾ ಟೋಲ್‌ಗೇಟ್‌ಗಳಲ್ಲೂ ಸುಮಾರು ಶೇ.೨೫ರಷ್ಟು ದರ ಹೆಚ್ಚಿಸಲಾಗಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿರುವ ಐದು ಟೋಲ್‌ಗೇಟ್‌ಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಸಲಾಗಿದೆ. ಇದರಿಂದ ಜನತೆ ಇಂದು ಪ್ರಯಾಣಕ್ಕಾಗಿ ಹೆದ್ದಾರಿಗಳನ್ನು ಪ್ರವೇಶಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ.
ಜನರು ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಈ ಸಂದರ್ಭದ ದರ ಏರಿಕೆಗೆ ಪ್ರಬಲವಾದ ಪ್ರತಿರೋಧ ತೋರಿಸ ಲೇಬೇಕಿದೆ. ಖಾಸಗಿ ಕಂಪೆನಿಗಳ ಲಾಭಕೋರ ತನಕ್ಕಾಗಿ ಜನರ ಹಿತ ಬಲಿಕೊಡುವ ಸರ್ಕಾರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಟೋಲ್ ವಿರೋಧಿ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಮಧ್ಯರಾತ್ರಿಯಿಂದಲೇ ಟೋಲ್ ಅಧಿಕ..!
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಮೂರೂವರೆಯಿಂದ ಏಳು ಪ್ರತಿಶತಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ ಹಿನ್ನೆಲೆ ದೇಶದೆಲ್ಲೆಡೆ ಇಂದು ಮಧ್ಯರಾತ್ರಿಯ ನಂತರ ಹಲವು ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವುದು ದುಬಾರಿಯಾಗಿದೆ.
ಅಲ್ಲದೆ, ಇದರಿಂದ ಕಡಿಮೆ ದೂರಕ್ಕೆ ೧೦ ಪ್ರತಿಶತದವರೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುವ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರಿನ ಏರ್ ಪೋರ್ಟ್ ರಸ್ತೆಗೂ ಟೋಲ್ ಬಿಸಿ..!
ಬೆಂಗಳೂರಿನಿಂದ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಟೋಲ್ ದರ ಕೂಡ ಏರಿಕೆಯಾಗಿದ್ದು, ಇಂದಿನಿಂದಲೇ ವಾಹನ ಸವಾರರು ಟೋಲ್ ಪಾವತಿ ಮಾಡಬೇಕಿದೆ.
ಎಷ್ಟು ದರ: ಕಾರು, ಜೀಪು, ವ್ಯಾನ್ ಲಘು ಮೋಟಾರು ವಾಹನ ಏಕಮುಖ ಸಂಚಾರಕ್ಕೆ ೧೧೦ ರೂ. ೨೪ ಗಂಟೆಯೊಳಗೆ ಹಿಂತಿರುಗುವ ಶುಲ್ಕ ೧೭೦ ರೂ ನಿಗದಿ ಮಾಡಲಾಗಿದೆ. ಇಷ್ಟು ದಿನ ಏಕಮುಖ ಸಂಚಾರಕ್ಕೆ ೧೦೫ ರೂ. ಹಾಗೂ ದ್ವಿಮುಖ ಸಂಚಾರ ೧೬೫ ರೂಪಾಯಿ ಇತ್ತು. ೩೫೫೫ ರೂಪಾಯಿಯಿದ್ದ ಮಾಸಿಕ ಪಾಸ್ ಶುಲ್ಕ ೩೭೫೫ ರೂಪಾಯಿಗೆ ಏರಿಕೆಯಾಗಿದೆ.
ಹಾಗೇ, ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್- ಏಕಮುಖ ಸಂಚಾರಕ್ಕೆ ೧೬೫ ರಿಂದ ೧೭೦ ರೂ. ಗೆ ಏರಿಕೆ. ಹಿಂತಿರುಗುವ ಶುಲ್ಕ ೨೪೫ ರಿಂದ ೨೬೦ ರೂಪಾಯಿಗೆ ಏರಿಕೆ. ಮಾಸಿಕ ಪಾಸ್ ೫೪೬೫ ರೂ. ಯಿಂದ ೫೭೪೫ ರೂ. ಗೆ ಏರಿಸಲಾಗಿದೆ.
ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್- ಏಕಮುಖ ಸಂಚಾರಕ್ಕೆ ೧೬೫ ರಿಂದ ೧೭೦ ರೂ. ಗೆ ಏರಿಕೆ. ಹಿಂತಿರುಗುವ ಶುಲ್ಕ ೨೪೫ ರಿಂದ ೨೬೦ ರೂಪಾಯಿಗೆ ಏರಿಕೆಯಾಗಿದ್ದು, ಮಾಸಿಕ ಪಾಸ್ ೫೪೬೫ ರೂ. ಯಿಂದ ೫೭೪೫ ರೂ. ಗೆ ಏರಿಸಲಾಗಿದೆ.
ಟ್ರಕ್ ಬಸ್ ೨ ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ ೩೩೦ ರಿಂದ ೩೪೫ ರೂ. ಗೆ ಏರಿಕೆ. ದ್ವಿಮುಖ ಸಂಚಾರಕ್ಕೆ ೪೯೫ ರೂ. ನಿಂದ ೫೨೦ ರೂ. ಗೆ ಏರಿಕೆ ಮಾಡಲಾಗಿದೆ. ೧೦,೯೯೦ ರೂಪಾಯಿ ಇದ್ದ ಮಾಸಿಕ ಪಾಸ್ ೧೧,೫೫೦ ರೂ. ಆಗಿದೆ.
ಭಾರೀ ವಾಹನಗಳು ೦೩ ರಿಂದ ೦೬ ಅಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ ೫೦೦ ರಿಂದ ೫೨೫ ರೂ. ದ್ವಿಮುಖ ಸಂಚಾರ ೭೫೦ ರೂ. ನಿಂದ ೭೯೦ ರೂ. ೧೬,೬೮೦ ರೂ. ಇದ್ದ ಮಾಸಿಕ ಪಾಸ್ ೧೭, ೫೨೫ ರೂ. ಅಧಿಕವಾಗಿದೆ.
ಇನ್ನೂ, ಭಾರೀ ಗಾತ್ರದ ವಾಹನಗಳಿಗೆ ೦೭ ಆಕ್ಸೆಲ್ ಹಾಗೂ ಅದಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ ೬೫೦ ರಿಂದ ೬೮೫ ರೂ. ಗೆ ಏರಿಕೆ. ದ್ವಿಮುಖ ೯೮೦ ರೂ. ನಿಂದ ೧೦೨೫ ರೂ. ಗೆ ಏರಿಕೆ. ೨೧, ೭೩೦ ರೂ. ಇದ್ದ ಮಾಸಿಕ ಪಾಸ್ ೨೨, ೮೩೦ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಸ್ಥಳೀಯ ಮಾಸಿಕ ಪಾಸ್ ೩೧೫ ರಿಂದ ೩೩೦ ರೂಪಾಯಿಗೆ ಏರಿಕೆಯಾಗಿದೆ. (ಇದು ಕಾರುಗಳಿಗೆ ಮಾತ್ರ ಅನ್ವಯವಾಗುತ್ತದೆ)