ಒಣ ಮೆಣಸಿನಕಾಯಿ ಬೆಲೆ ಏರಿಕೆ ಇಳುವರಿ ಕುಂಠಿತ


ಸಂಜೆವಾಣಿ ವಾರ್ತೆ
ಸಿರಿಗೇರಿ ಜ11. ಈವರ್ಷ ಒಣ ಮೆಣಸಿನಕಾಯಿ ಧರದಲ್ಲಿ ಏರಿಕೆಗತಿ ಕಂಡುಬಂದಿದೆ. ಆದರೆ ಮೆಣಸಿನಕಾಯಿ ಬೆಳೆಯಲ್ಲಿ ಕುಂಠಿತವಾಗಿ ಇಳುವರಿ ಇಲ್ಲದೇ ಚೂರುಪಾರು ಬೆಳೆಯನ್ನು ರೈತರು ಕಾಣುವಂತಾಗಿದೆ. ಬ್ಯಾಡಗಿ ಮೆಣಸಿನಕಾಯಿ ಬೆಲೆಯು ಕಳೆದ ತಿಂಗಳಿನಿಂದ ಈ ತಿಂಗಳಿಗೆ ಸ್ವಲ್ಪ ಇಳಿಕೆ ಕಂಡಬಂದರೂ ಗುಣಮಟ್ಟದ ಕಾಯಿ ಆಧಾರದಲ್ಲಿ ಕ್ವಿಂಟಾಲ್‍ಗೆ 30 ಸಾವಿರ ಮೇಲ್ಪಟ್ಟು ನಡೆಯುತ್ತಿದೆ. ರೈತರು ಮಾಹಿತಿ ನೀಡುತ್ತಿರುವ ಪ್ರಕಾರ ಬ್ಯಾಡಗಿಕಾಯಿಗೆ ಒಂದು ಕ್ವಿಂಟಾಲ್‍ಗೆ 30 ಸಾವಿರದಿಂದ 45 ಸಾವಿರ ರೂ. ಗುಂಟೂರು, ಇತರೆ ತಳಿಗಳ ಮೆಣಸಿನಕಾಯಿಗೆ ಕ್ವಿಂಟಾಲ್‍ಗೆ 15 ಸಾವಿರ ರೂ. ನಿಂದ 22 ಸಾವಿರ ರೂ. ಗಳ ವರೆಗೆ ಆಶಾದಾಯಕ ಸ್ಥಿತಿಯಲ್ಲಿ ಸಾಗುತ್ತಿದೆ. ಆದರೆ ಹಲ್ಲಿದ್ದಾಗ ಕಡಲೆ ಇಲ್ಲ ಎನ್ನುವಂತೆ ರೈತರ ಜಮೀನಿನಲ್ಲಿ ತಕ್ಕಮಟ್ಟಿಗೆ ಬೆಳೆ ಇಲ್ಲದೇ ಒಂದು ಎರೆಡು ಕ್ವಿಂಟಾಲ್‍ನಷ್ಟು ಇಳುವರಿ ಸಿಕ್ಕು ಅಲ್ಲಿಂದಲ್ಲಿಗೇ ಆಯಿತು ಎನ್ನುವ ಸ್ಥಿತಿಯ ಬೆಳೆ ಬಂದಿದೆ.
ಸಿರಿಗೇರಿ ಹೋಬಳಿಯಲ್ಲಿ ಈವರ್ಷ ನೀರಾವರಿ ಮತ್ತು ಮಳೆಯಾಶ್ರಿತ ಜಮೀನುಗಳಲ್ಲಿ ಸುಮಾರು 2000 ರಿಂದ 3ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಆದರೆ ಈವರ್ಷದ ಹವಾಮಾನ, ಮಳೆ, ರೋಗಗಳ ಏರುಪೇರಿನಿಂದ ಸುಮಾರು 40% ರಷ್ಟು ಜಮೀನಿನ ಮೆಣಸಿನಕಾಯಿ ಬೆಳೆ ಕೈಕೊಟ್ಟು, ಆ ಬೆಳೆ ತೆಗೆದು ಬೇರೆ ಬೆಳೆಯನ್ನು ಬಿತ್ತುವಂತಾಯಿತು. ಇನ್ನು ಉಳಿದ ಜಮೀನುಗಳಲ್ಲಿನ ಮೆಣಸಿನಕಾಯಿ ಹಾಗೇ ಕಾಪಾಡಿಕೊಂಡು ಬಂದರೆ. ಎಕರೆಗೆ 1ಕ್ವಿಂಟಾಲ್‍ನಿಂದ 3 ಕ್ವಿಂಟಾಲ್ ಮೆಣಸಿನಕಾಯಿ ಸಿಕ್ಕಿದೆ. ಎಕರೆಗೆ 50, 60 ಸಾವಿರ ರೂ. ಖರ್ಚು ಬಂದಿದೆ. 3ಕ್ವಿಂಟಾಲ್ ಆದವರಿಗೆ ದುಡಿದ ಕೂಲಿ ಸಿಕ್ಕರೆ, ಒಂದೆರಡು ಕ್ವಿಂಟಾಲ್ ಆದವರಿಗೆ ಖರ್ಚುವೆಚ್ಚಕ್ಕೆ ಸರಿದೂಗಿಸಿಕೊಂಡು ಪೆಚ್ಚುಮೋರೆ ಹಾಕುವಂತಾಗಿದೆ. ಮೆಣಸಿನಕಾಯಿಯಲ್ಲಿ ಸಾಲಗಾರರಾಗಿದ್ದೇವೆ, ಮೆಣಸಿನಕಾಯಿಯಲ್ಲೇ ಗಳಿಸಿಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕೆಂಬ ರೈತರ ಪಾಲಿಗೆ ಮೆಣಸಿನಕಾಯಿ ಬೆಳೆಯುವಿಕೆ ಕಣ್ಣಾಮುಚ್ಚಾಲೆ ಆಟವಾಗಿರುವುದಂತೂ ನಿಜ.