ಒಣದ್ರಾಕ್ಷಿಯ ಉಪಯೋಗಗಳು

ಒಣದ್ರಾಕ್ಷಿ ಅನಾದಿಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಔಷಧೀಯವಾಗಿ ಬಳಸುವುದು ರೂಢಿಯಲ್ಲಿದೆ. ದ್ರಾಕ್ಷಿಯು ಸಿಹಿರಸವುಳ್ಳದ್ದು, ಶೀತಲವಾದುದು, ಮಲವನ್ನು ಸಡಿಲಿಸುವ ಗುಣವಿದೆ. ಬಾಯಾರಿಕೆ, ಬಳಲಿಕೆ, ಹೊಟ್ಟೆಉರಿಯನ್ನು ಉಪಶಮನ ಮಾಡಬಲ್ಲದು. ರಕ್ತಪಿತ್ತವನ್ನು ಶಮನಗೊಳಿಸುತ್ತದೆ. ಶರೀರಕ್ಕೆ ಬಲವನ್ನು, ಕಾಂತಿಯನ್ನು ಕೊಡುತ್ತದೆ. ಇದು ತೇವಾಂಶ, ಸಸಾರಜನಕ, ಶರ್ಕರ ಪಿಷ್ಠ, ಕಬ್ಬಿಣ, ಸುಣ್ಣ, ರಂಜಕ, ಎ ಮತ್ತು ಸಿ ಜೀವಸತ್ವಗಳನ್ನು ಹೊಂದಿದೆ.
ದ್ರಾಕ್ಷಿಯ ಹಣ್ಣಿನಲ್ಲಿ ಅದ್ಭುತವಾದ ಗುಣವಿದೆ, ರಕ್ತಮಾಂಸಗಳಿಗೆ ಪೋಷಕವಾಗಿರುವ ಧಾತುವು ಶರೀರದಲ್ಲಿ ಸಂಪೂರ್ಣವಾಗಿ ಹುಟ್ಟದೆ ಬಲವು ಕುಂದಿರುವಾಗ, ದ್ರಾಕ್ಷಿಯು ಈ ರಸ ಧಾತುವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಶರೀರಕ್ಕೆ ಬಲವನ್ನು ಕೊಡುತ್ತದೆ.
೧. ನಿಶ್ಯಕ್ತಿ : ಯಾರಾದರೂ ನಿಶ್ಯಕ್ತಿಯಿಂದ ಬಳಲುತ್ತಿದ್ದರೆ ಅಥವಾ ಖಾಯಿಲೆಯಿಂದ ಎದ್ದಾಗ ಶಕ್ತಿಯು ಕುಂದಿದ್ದರೆ ಅಂತಹವರು ಒಣದ್ರಾಕ್ಷಿಯನ್ನು ಪ್ರತಿನಿತ್ಯ ಸೇವಿಸುತ್ತಿದ್ದರೆ, ಶರೀರದಲ್ಲಿ ಶಕ್ತಿಯು ವಿದ್ಯುತ್ ರೀತಿಯಲ್ಲಿ ಪ್ರವಹಿಸುತ್ತದೆ.
೨. ಹೊಟ್ಟೆಭಾರ: ವಿಪರೀತವಾಗಿ ಊಟಮಾಡಿ ಹೊಟ್ಟೆಭಾರವಾಗಿದ್ದಾಗ, ಸ್ವಲ್ಪ ಒಣದ್ರಾಕ್ಷಿಯನ್ನು ತಿಂದರೆ, ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯು ಹಗುರವಾಗುತ್ತದೆ.
೩. ದುರ್ಬಲ ಮಕ್ಕಳಿಗೆ: ಕೆಲವು ಮಕ್ಕಳು ಹುಟ್ಟಿದಾಗಲೇ ದುರ್ಬರಾಗಿರುತ್ತಾರೆ. ಅವರಿಗೆ ಪ್ರತಿನಿತ್ಯ ಸ್ವಲ್ಪ ಒಣದ್ರಾಕ್ಷಿ ರಸವನ್ನು ಕುಡಿಸುತ್ತಾ ಬಂದರೆ, ೮ – ೧೦ ದಿನದಲ್ಲಿ ಅವರು ಸಾಕಷ್ಟು ಸುಧಾರಿಸುತ್ತಾರೆ.
೪. ಹೃದಯವು ದುರ್ಬಲವಾಗಿದ್ದರೆ: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರೆ, ಹೃದಯದ ಬಡಿತ ಜಾಸ್ತಿಯಾಗಿದ್ದರೆ, ಸಿಹಿಯಾದ ಒಣದ್ರಾಕ್ಷಿಯನ್ನು ಕ್ರಮಬದ್ಧವಾಗಿ ತಿನ್ನುತ್ತಿದ್ದರೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
೫. ಯಕೃತ್ ಹಾಗೂ ಕೀಲುಗಳ ಸಮಸ್ಯೆ: ಕೀಲುಗಳು ಹಿಡಿದುಕೊಂಡಿದ್ದರೆ, ಯಕೃತ್ತಿನಲ್ಲಿ ತೊಂದರೆ ಇದ್ದರೆ, ಅಜೀರ್ಣದಿಂದ ಬಳಲುತ್ತಿದ್ದರೆ, ಸ್ವಲ್ಪ ಹುಳಿಯಾಗಿರುವ ಒಣದ್ರಾಕ್ಷಿಯನ್ನು ತಿಂದರೆ ಅನುಕೂಲವಾಗುತ್ತದೆ.
೬. ಮಲೇರಿಯಾ: ಮಲೇರಿಯಾ ರೋಗಿಗಳಿಗೆ ಒಣದ್ರಾಕ್ಷಿ ಒಳ್ಳೆಯ ವರವಾಗಿದೆ. ಇದರ ಸೇವನೆಯಿಂದ ಮಲೇರಿಯಾದಿಂದ ಬಳಲುತ್ತಿರುವ ಅನೇಕ ರೊಗಿಗಳಿಗೆ ಅನುಕೂಲವಾಗಿದೆ. ಸ್ವಲ್ಪ ಸುಣ್ಣವನ್ನು ನೀರಿನಲ್ಲಿ ಕರಗಿಸಿ, ಆ ನೀರಿನಲ್ಲಿ ಒಣದ್ರಾಕ್ಷಿ ನೆನೆಹಾಕಿ ಅದು ನೆನೆದ ನಂತರ, ಚೆನ್ನಾಗಿ, ಅಗಿದು ತಿನ್ನಬೇಕು ಅಥವಾ ಅದನ್ನು ಚೆನ್ನಾಗಿ ಕಿವುಚಿ ರಸವನ್ನು ಕುಡಿಯಬೇಕು.
೭. ವಾಯುವಿನ ತೊಂದರೆಗೆ: ಯಾರಿಗಾದರೂ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಉಪದ್ರವ ಕೊಡುತ್ತಿದ್ದರೆ, ಕೆಲವರಿಗೆ ಬಹಳ ವರ್ಷಗಳಿಂದ ವಾಯು ಸೇರಿಕೊಂಡು ತೊಂದರೆ ಕೊಡುತ್ತಿದ್ದರೆ, ಕೆಲವು ಕಾಲ ಒಣದ್ರಾಕ್ಷಿಯಿಂದ ಚಹಾ ತಯಾರು ಮಾಡಿ ನಿಯಮಿತವಾಗಿ ಸೇವಿಸುತ್ತಿದ್ದರೆ ತುಂಬಾ ಅನುಕೂಲವಾಗುತ್ತದೆ. ಈ ಸಮಯದಲ್ಲಿ ಅವರು ಕಾಫಿ, ಟೀ ಯನ್ನು ಸೇವಿಸಬಾರದು.
೮. ಒಣದ್ರಾಕ್ಷಿ ಚಹಾ: ಒಣದ್ರಾಕ್ಷಿಯ ಕಡ್ಡಿಗಳನ್ನು ಬೇರ್ಪಡಿಸಿ ಶುದ್ಧಿ ಮಾಡಿಟ್ಟುಕೊಳ್ಳಿ. ನೀರಿನಲ್ಲಿ ೨ ಬಾರಿ ಚೆನ್ನಾಗಿ ತೊಳೆಯಿರಿ. ನೀರಿಗೆ ಒಣದ್ರಾಕ್ಷಿ ಜಜ್ಜಿ ಹಾಕಿ ಚೆನ್ನಾಗಿ ಬೇಯಿಸಿ. ಆರಿದ ಮೇಲೆ ಚೆನ್ನಾಗಿ ಕಿವುಚಿ ಶೋಧಿಸಿಕೊಳ್ಳಿ. ಇದಕ್ಕೆ ಸ್ವಲ್ಪ ನಿಂಬೆರಸ, ಏಲಕ್ಕಿ ಪುಡಿ ಹಾಕಿ ಕಲಕಿ ಕುಡಿಯಿರಿ. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಸೇವಿಸುವುದರಿಂದ ಮಲಬದ್ಧತೆ, ವಾಯುವಿನ ಸಮಸ್ಯೆ ನಿವಾರಣೆ, ಶರೀರಕ್ಕೆ ಬಲ, ಬಾಯಾರಿಕೆ ರೋಗ ನಿವಾರಣೆ, ರಕ್ತವೃದ್ಧಿ, ಶರೀರಕ್ಕೆ ಪುಷ್ಠಿ ದೊರೆಯುತ್ತದೆ, ಆಯಾಸ ಪರಿಹಾರ, ಹೊಸಚೈತನ್ಯ, ಲವಲವಿಕೆ ಉಂಟಾಗುತ್ತದೆ ಮತ್ತು ಜೀರ್ಣಶಕ್ತಿ ಉತ್ತಮವಾಗುತ್ತದೆ.
೯. ನೆಗಡಿ, ಕೆಮ್ಮಿಗೆ: ಒಣದ್ರಾಕ್ಷಿ, ಮೆಣಸು, ಅತಿಮಧುರ ಇವನ್ನು ಚೆನ್ನಾಗಿ ಕುಟ್ಟಿ, ಕಡಲೆಕಾಯಿ ಬೀಜ ಗಾತ್ರದ ಉಂಡೆಯನ್ನು ದಿನಕ್ಕೆ ೩ ಬಾರಿ ಸೇವಿಸುತ್ತಾ ಬಂದರೆ, ನೆಗಡಿ, ಶೀತದ ಮತ್ತು ಉಷ್ಣದ ಕೆಮ್ಮು ನಿವಾರಣೆಯಾಗುತ್ತದೆ.
೧೦. ಎಲ್ಲಾ ವಿಧವಾದ ಜ್ವರಕ್ಕೆ: ಒಣದ್ರಾಕ್ಷಿ, ಅಮೃತಬಳ್ಳಿ, ಶುಂಠಿ, ಬೆಟ್ಟದ ನೆಲ್ಲಿಕಾಯಿ, ಇವನ್ನು ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಿ. ನಂತರ ಶೋಧಿಸಿ ಕುಡಿಯುವುದರಿಂದ ಎಲ್ಲಾ ರೀತಿಯ ಜ್ವರ, ಪಿತ್ತಜ್ವರ, ವಾಂತಿಯಾಗುವಿಕೆ, ಕೆಮ್ಮು, ಬಾಯಾರಿಕೆ, ಬಾಯಿ ಒಣಗುವುದು ಎಲ್ಲಕ್ಕೂ ಪರಿಹಾರ ಸಿಗುವುದು.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧