ಒಣಗಿರುವ ಬೆಳೆಪರಿಶೀಲಿಸಿದ ಸಚಿವರುಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ಕೃಷಿ ಸಚಿವ ಕಳೆದ ಎರೆಡು ದಿನಗಳಿಂದ ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸಿದ್ದು ಇಂದು ತಾಲೂಕಿನ ಹಲಕುಂದಿ ಗ್ರಾಮದ ವಿವಿಧ ಬೆಳೆಗಳು ಮಳೆ ಅಭಾವದಿಂದ ಒಣಗಿರುವುದನ್ನು  ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಜೊತೆ ಸೇರಿ ಪರಿಶೀಲನೆ ಮಾಡಿದರು.
ರೈತರು ಬೆಳೆದ ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆಗಳನ್ನು ಪರಿಶೀಲಿಸಿದ ಸಚಿವರು ರೈತರಿಂದ ನಷ್ಟದ ಬಗ್ಗೆ ಮಾಹಿತಿ ಪಡೆದರು. ಮಳೆಯಿಲ್ಲದೆ ಈ ಬಾರಿ ಬೆಳೆದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು  ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ರಾಜ್ಯ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು. ವಿಮೆ ಕಟ್ಟಿದರೂ ಈವರೆಗೂ ಹಣ ಬಂದಿಲ್ಲ ಎಂದು ಸಚಿವರಿಗೆ ನಷ್ಟಕ್ಕೊಳಗಾದ ರೈತರು ಮನವರಿಕೆ ಮಾಡಿಕೊಟ್ಟರು.
ಸಚಿವ ಚಲುವರಾಯಸ್ವಾಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬ ರೈತರು ಬೆಳೆಗಳಿಗೆ ವಿಮೆ ಸೌಲಭ್ಯ ಮಾಡಬೇಕು. ಕಳೆದ ಮೂರು ವರ್ಷಗಳಿಂದ ರೈತರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಈ ಬಾರಿ ಮಳೆಯಿಲ್ಲದೆ ಬರ ಎದುರಾಗಿ ಬೆಳೆಗಳು ಹಾನಿಯಾಗಿವೆ. ರಾಜ್ಯದ ಬರದ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿ ಗಮನಕ್ಕೆ ತಂದಿದ್ದು, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಅಭಿವೃದ್ಧಿಗೆ ಶ್ರಮಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಸರಕಾರದ ಯೋಜನೆಗಳನ್ನು ಪ್ರತಿ ಗ್ರಾಮದ ರೈತರಿಗೆ ತಿಳಿಸುವ ಕಾರ್ಯ ಗ್ರಾಪಂ ಪಿಡಿಒಗಳಿಂದ ನಡೆಯಬೇಕು. ಬೆಳೆ ಪರಿಹಾರ, ವಿಮೆ ಸೇರಿದಂತೆ ನಾನಾ ಯೋಜನೆಗಳ ಕರಪತ್ರವನ್ನು ಮುದ್ರಿಸಿ ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.