ಒಡ ಹುಟ್ಟಿದ ಅಣ್ಣನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕ-ತಂಗಿ ಸೇರಿ ಆರು ಜನರ ಬಂಧನ

ಕಲಬುರಗಿ,ಆ.2-ನಗರ ಹೊರ ವಲಯದ ಕೆರೆಭೋಸಗಾ ಕ್ರಾಸ್ ಬಳಿ ಜುಲೈ 27 ರಂದು ನಡೆದಿದ್ದ ಗಾಜಿಪುರದ ನಾಗರಾಜ ಹಣಮಂತ ಮಟಮಾರಿ (28) ಎಂಬುವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಪ್ರೀತಿಗೆ ಅಡ್ಡಿ ಪಡಿಸಿದ್ದಕ್ಕಾಗಿ ಅಕ್ಕ-ತಂಗಿ ಸೇರಿ ಒಡಹುಟ್ಟಿದ ಅಣ್ಣನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ಸಹೋದರಿಯರು ಸೇರಿ 6 ಜನರನ್ನು ಬಂಧಿಸಲಾಗಿದೆ
ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಜು.27 ರಂದು ರಾತ್ರಿ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆರಿಭೋಸಗಾ ಕ್ರಾಸ್ ಬಳಿ ನಾಗರಾಜನನ್ನು ಕೊಲೆ ಮಾಡಲಾಗಿತ್ತು. ಮೃತ ನಾಗರಾಜ ಲಾರಿ ಕ್ಲೀನರ್ ಆಗಿದ್ದು, ತನ್ನ ತಂಗಿಯರ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರಿಗೆ ಚೆನ್ನಾಗಿರುವಂತೆ ಬುದ್ಧಿವಾದ ಹೇಳುತ್ತಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳ ಉಂಟಾಗುತ್ತಿತ್ತು. ಈ ಕಾರಣಕ್ಕಾಗಿಯೇ ಅಕ್ಕ-ತಂಗಿ ಸೇರಿ ಸುಪಾರಿ ಕೊಟ್ಟು ಅಣ್ಣನನ್ನೇ ಕೊಲೆ ಮಾಡಿಸಿದ್ದಾರೆ. ಈ ಸಂಬಂಧ ನಾಗರಾಜನ ಸಹೋದರಿಯರಾದ ಗಾಜಿಪುರ ಬಡಾವಣೆಯ ಸುನಿತಾ ಕಟ್ಟಿಮನಿ (30), ನಿರ್ಮಲಾ ಮತ್ತು ಅದೇ ಬಡಾವಣೆಯ ಆಸಿಫ್ ಪಟೇಲ್ (23), ರೋಹಿತ್ ಅಲಿಯಾಸ್ ಚಿನ್ನು ಬಳಿಚಕ್ರ, ಮೊಹಸಿನ್ ಶೇಖ್ ಮತ್ತು ಅವಿನಾಶ ಮದ್ರೇಕರ್ (23) ಎಂಬುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿಸಿಪಿಗಳಾದ ಅಡ್ಡುರೂ ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಪಿಐ ರಮೇಶ ಕಾಂಬಳೆ ಅವರ ನೇತೃತ್ವದಲ್ಲಿ ಪಿ.ಎಸ್.ಐ.ಕವಿತಾ ಚವ್ಹಾಣ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಪ್ರಕಾಶ, ನಾಗೇಂದ್ರ, ಅನಿಲ್, ಪ್ರಶಾಂತ, ಶರಣಬಸಪ್ಪ ಮತ್ತು ಯಲ್ಲಪ್ಪ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.