ಒಡೆದ ಹಿಮ್ಮಡಿಗೆ ಮನೆಮದ್ದು

ನೈಸರ್ಗಿಕವಾಗಿ ನಮ್ಮ ಹಸ್ತ ಮತ್ತು ಪಾದಗಳ ಚರ್ಮ ಅತ್ಯಂತ ದಪ್ಪನಾಗಿರುತ್ತದೆ. (ಇದೇ ಕಾರಣಕ್ಕೆ ನೆನೆದಾಗ ಹಿಗ್ಗುವ ಚರ್ಮ ಮಡಿಕೆ ಮಡಿಕೆಯಾಗಿರುತ್ತದೆ). ಏಕೆಂದರೆ ನಡೆದಾಡಲು ಮತ್ತು ಒರಟು ಕೆಲಸಗಳನ್ನು ಮಾಡಲು ಈ ಚರ್ಮ ಅಗತ್ಯವಾಗಿದೆ. ನಡಿಗೆ ಮತ್ತು ಕೆಲಸದಿಂದ ಈ ಚರ್ಮ ಸವೆಯುತ್ತದೆ ಹಾಗೂ ಹೊಸ ಚರ್ಮ ಬೆಳೆಯುತ್ತದೆ. ಆದರೆ ಪಾದರಕ್ಷೆಗಳನ್ನು ಬಳಸುವ ನಮ್ಮ ಪಾದಗಳ ಚರ್ಮ ಸವೆಯದೇ ಒಳಗಿನಿಂದ ಹೊಸಚರ್ಮ ಬೆಳೆದ ನಂತರ ಹೊರಚರ್ಮ ಸೆಳೆತ ತಾಳದೇ ಬಿರಿಯುತ್ತದೆ. ಅಷ್ಟೇ ಅಲ್ಲದೆ ಈ ಬಿರುಕು ಚರ್ಮದ ಆಳಕ್ಕೆ ಇಳಿಯುವ ಕಾರಣ ಹೆಚ್ಚಾದರೆ ಒಳಗಣ ಹೊಸಚರ್ಮದಿಂದ ರಕ್ತ ಬರುವಂತೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಇಲ್ಲದೇ ಒಣಹವೆಯಾಗುವ ಕಾರಣ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಇಲ್ಲದೇ ಹೊರಚರ್ಮ ಶೀಘ್ರವಾಗಿ ಒಣಗಿ ಬಿರುಕಿಗೆ ಕಾರಣವಾಗುತ್ತದೆ. ಈ ತೊಂದರೆಯಿಂದ ಹೊರಬರಲು ಕೆಲವು ಮನೆಮದ್ದುಗಳು.
ಬೇವಿನ ಎಲೆಗಳು: ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.
ಮೊಸರಿನ ರೆಸಿಪಿ: ತನ್ನ ತೇವಕಾರಕ ಹಾಗೂ ಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಗುಣಧರ್ಮಗಳ ಕಾರಣದಿ೦ದಾಗಿ ಒಡೆದ ಹಿಮ್ಮಡಿಗಳಿಗೆ ಮನೆಮದ್ದಿನ ರೂಪದಲ್ಲಿ ಮೊಸರು ಚಿರಪರಿಚಿತವಾಗಿದೆ. ಬಿಳಿ ವಿನೆಗರ್ ನೊ೦ದಿಗೆ ಬೆರೆಸಿದಾಗ, ದ್ರಾವಣವು ಎಲ್ಲಾ ಮೃತ ಚರ್ಮವನ್ನೂ ನಿವಾರಿಸಿಬಿಡುತ್ತದೆ ಹಾಗೂ ಜೊತೆಗೆ ಬಿರುಕುಗಳ ಆಳದಲ್ಲಿ ಸ೦ಚಯಗೊ೦ಡಿರಬಹುದಾದ ಧೂಳುಕೊಳೆಗಳೆಲ್ಲವನ್ನೂ ತೊಡೆದುಹಾಕುತ್ತದೆ.
ಜೇನುತುಪ್ಪದ ಆರೈಕೆ: ಜೇನುತುಪ್ಪವು ಒಡೆದ ಹಿಮ್ಮಡಿಗಳಿಗೆ ತೇವಾ೦ಶವನ್ನು ಪೂರೈಸಿ, ಅವುಗಳ ಸೋ೦ಕುಗಳನ್ನು ನಿವಾರಿಸಿದರೆ, ಬಿಳಿ ವಿನೆಗರ್ ಮೃತ ಚರ್ಮವನ್ನು ತೊಡೆದುಹಾಕುತ್ತದೆ. ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಮಾಲೀಸು ಮಾಡಿಕೊಳ್ಳಿರಿ ಹಾಗೂ ಬಳಿಕ ಅದನ್ನು ಪಾದಗಳಲ್ಲಿಯೇ ಹಾಗೆಯೇ ಒಣಗಲು ಬಿಡಿರಿ. ಇದಾದ ಬಳಿಕ, ಹಿಮ್ಮಡಿಗಳ ಬಿರುಕುಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿ೦ದ ತೊಳೆದುಬಿಡಿರಿ.
ಬಾಳೆಹಣ್ಣಿನ ಪೇಸ್ಟ್: ಒಂದು ದೊಡ್ಡ ಬಾಳೆಹಣ್ಣನ್ನು ಕಿವುಚಿ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.