ಒಡಿಶಾ ರೈಲು ದುರಂತ ಅಧಿಕಾರಿ ತಲೆ ದಂಡ

ನವದೆಹಲಿ,ಜು.೧-೨೯೧ ಜನರ ಸಾವಿಗೆ ಕಾರಣವಾದ ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತದ ಒಂದು ತಿಂಗಳ ನಂತರ ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಅವರ ಸ್ಥಾನಕ್ಕೆ ಅನಿಲ್ ಕುಮಾರ್ ಮಿಶ್ರಾ ಅವರಿಗೆ ಅಧಿಕಾರದ ಜವಾಬ್ದಾರಿ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಅಪಘಾತದ ತನಿಖೆಯನ್ನು ಸಿಬಿಐ ಮುಂದುವರೆಸಿದೆ.
ತ್ರಿವಳಿ ರೈಲು ದುರಂತ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಇದು ರಾಜಕೀಯ ರೂಪ ಪಡೆದು ನಾಯಕರ ಕಿತ್ತಾಟಕ್ಕೆ ಕಾರಣವಾಯಿತು. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದು , ರೈಲ್ವೇಸ್‌ನ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರ ತಲೆದಂಡಕ್ಕೆ ಕಾರಣವಾಗಿದೆ .ಭಾರತೀಯ ರೈಲ್ವೇ ಅಧಿಕೃತ ಹೇಳಿಕೆಯಲ್ಲಿ ಅನಿಲ್ ಕುಮಾರ್ ಮಿಶ್ರಾ ಅವರನ್ನು ಹೊಸ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ.
ತಿಂಗಳು ಕಳೆದರೂ ಶವ ಶೋಧ ಕಾರ್ಯ ಮುಗಿದಿಲ್ಲ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ತ್ರಿವಳಿ ರೈಲು ಡಿಕ್ಕಿ ಸಂಭವಿಸಿದ ಬಳಿಕ ಭುವನೇಶ್ವರದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ನಲ್ಲಿ ಶವ ಶೋಧ ಕಾರ್ಯ ಇನ್ನೂ ಮುಗಿದಿಲ್ಲ. ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ೮೧ ಮೃತದೇಹಗಳು ಬಾಕಿ ಇವೆ. ಒಂದೇ ಮೃತದೇಹಕ್ಕಾಗಿ ಹಲವಾರು ಜನರು ತಮ್ಮ ಹಕ್ಕು ಚಲಾಯಿಸಿರುವುದರಿಂದ , ನಾವು ಅದರ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೨೯ ಮಾದರಿಗಳ ಡಿಎನ್‌ಎ ಪರೀಕ್ಷೆಯ ನಂತರ ದೃಢೀಕರಣವನ್ನು ಪಡೆಯಲಾಗಿದೆ. ಅವರ ಸಂಬಂಧಿಕರು-ಹಕ್ಕುದಾರರಿಗೆ ತಿಳಿಸಲಾಗಿದೆ ಎಂದು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಸುಲೋಚನಾ ದಾಸ್ ಮಾಹಿತಿ ನೀಡಿದರು.
ತ್ರಿವಳಿ ರೈಲು ದುರಂತದ ಕಹಿ ನೆನಪು: ಜೂನ್ ೨ ರಂದು ಸಂಜೆ ೭ ಗಂಟೆ ಸುಮಾರಿಗೆ ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ರೈಲು ಒಡಿಶಾದ ಬಾಲಸೋರ್ ಜಿಲ್ಲೆಯ ಬನಹಾಗಾ ರೈಲು ನಿಲ್ದಾಣದ ಬಳಿ ಹಳಿತಪ್ಪಿತ್ತು. ಇದರಿಂದಾಗಿ ಇನ್ನೊಂದು ಮಾರ್ಗದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಅದರ ಪ್ರಭಾವದಿಂದಾಗಿ, ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯಲ್ಲಿ ಬಿದ್ದವು. ಅದೇ ಸಮಯದಲ್ಲಿ ಬೆಂಗಳೂರಿನ ಯಶವಂತಪುರದಿಂದ ಬಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ಯಶವಂತಪುರದಿಂದ ಬರುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ರೈಲು ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ಅತೀ ವೇಗದಲ್ಲಿ ಡಿಕ್ಕಿ ಹೊಡೆದಿದೆ.
ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ದುರಂತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ತಂಡ ಹಲವು ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಟ್ರಿಪಲ್ ರೈಲು ಅಪಘಾತದಿಂದ ಹಾನಿಗೊಳಗಾದ ಹಳಿಗಳನ್ನು ಅಪಘಾತದ ೫೧ ಗಂಟೆಗಳ ಒಳಗೆ ಮರು-ಜೋಡಣೆ ಮಾಡಲಾಯಿತು ಮತ್ತು ರೈಲುಗಳನ್ನು ಓಡಿಸಲು ಅನುಮತಿಸಲಾಯಿತು.