ಒಡಿಶಾ; ಭೀಕರ ಅಪಘಾತ ೧೨ ಮಂದಿ ದುರ್ಮರಣ

ಭುವನೇಶ್ವರ(ಒಡಿಶಾ),ಜೂ.೨೬- ಬಾಲಾಸೋರ್ ಬಳಿ ಭೀಕರ ರೈಲು ಅಪಘಾತ ಮಾಸುವ ಮುನ್ನವೇ ನಿನ್ನೆ ತಡರಾತ್ರಿ ರಾಜ್ಯದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ ಒಂದೇ ಕುಟುಂಬದ ೭ ಜನ ಸೇರಿದಂತೆ ೧೨ ಮಂದಿ ಮೃತಪಟ್ಟಿದ್ದಾರೆ.ಗಂಜಾಮ್ ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ಡಿಕ್ಕಿಯಾಗಿದ್ದು, ಖಾಸಗಿ ಬಸ್‌ನಲ್ಲಿದ್ದ ಒಂದೇ ಕುಟುಂಬದ ೭ ಮಂದಿ ಸೇರಿ ೧೨ ಜನ ಮೃತಪಟ್ಟಿದ್ದು ೭ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.ದಿಗಪಹಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆರ್ಹಾಂಪುರ್-ತಪ್ತಪಾಣಿ ರಸ್ತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಎರಡೂ ಬಸ್‌ಗಳು ಜಖಂಗೊಂಡಿವೆ.ಮೃತರೆಲ್ಲರೂ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಒಂದೇ ಕುಟುಂಬದ ಏಳು ಜನರಿದ್ದಾರೆ” ಎಂದು ಗಂಜಾಮ್ ಜಿಲ್ಲಾಧಿಕಾರಿ ದಿವ್ಯಜ್ಯೋತಿ ಪರಿದಾ ತಿಳಿಸಿದ್ದಾರೆ.ಮೃತರೆಲ್ಲರೂ ಬೆರ್ಹಾಂಪುರದಲ್ಲಿ ಮದುವೆ ಮುಗಿಸಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದರು. ಪಾರ್ಟಿ ಮುಗಿಸಿಕೊಂಡು ಊರಿಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿದೆ. ನಿದ್ರೆಯ ಮಂಪರಿನಲ್ಲಿದ್ದಾಗಲೇ ಅಪಘಾತ ಸಂಭವಿಸಿದ್ದು, ಯಾರಿಗೆ ಏನಾಗುತ್ತಿದೆ ಎಂಬಷ್ಟರಲ್ಲಿಯೇ ಪ್ರಾಣಪಕ್ಷಿ ಹಾರಿಹೋಗಿವೆ. ಅಪಘಾತ ಸಂಭವಿಸುತ್ತಲೇ ಪೊಲೀಸರು ಹಾಗೂ ಆಂಬ್ಯುಲೆನ್ಸ್‌ಗಳು ಕೂಡಲೇ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ಸಂಭವಿಸಿದ ಸುದ್ದಿ ತಿಳಿಯುತ್ತಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ಮೃತರ ಕುಟುಂಬಸ್ಥರಿಗೆ ತಲಾ ೩ ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಗಾಯಾಳುಗಳ ಚಿಕಿತ್ಸೆಗಾಗಿ ಈಗಾಗಲೇ ೩೦ ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೂನ್ ೨ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಬಹನಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳು ಡಿಕ್ಕಿಯಾಗಿ ೨೭೫ ಜನ ಮೃತಪಟ್ಟಿದ್ದರು. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಭೀಕರ ಅಪಘಾತದ ನೆನಪುಗಳು ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.