ಒಡಿಶಾದಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ

ಮೈತ್ರಿ ಕಗ್ಗಂಟು

ನವದೆಹಲಿ/ಭುವನೇಶ್ವರ ನಗರ, ಮಾ.೯- ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ೩೭೦ ಸ್ಥಾನಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ, ಒಡಿಶಾದಲ್ಲಿ ಬಿಜೆಡಿ ಪಕ್ಕಕ್ಕಿಟ್ಟು ಏಕಾಂಗಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಲೋಕಸಭೆ ಚುನಾವಣೆ ಮತ್ತು ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ,ಬಿಜೆಡಿ ನಡುವೆ ಮೈತ್ರಿ ಮಾತುಕತೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಸುಳಿವು ನೀಡಿದೆ.
ಒಡಿಶಾದಲ್ಲಿ ನಾವು ೧೦ಕ್ಕೂ ಕಡಿಮೆ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೆ ಅದು ನಮಗೆ ಆತ್ಮಹತ್ಯೆ ಇದ್ದಂತೆ ಈ ಹಿನ್ನೆಲೆಯಲ್ಲಿ ಬಿಜೆಡಿ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ತಿಳಿಸಿದ್ದಾರೆ.
ಮೈತ್ರಿ ಬಗ್ಗೆ ಯಾವುದೇ ಮಾತುಕತೆ ಇಲ್ಲ. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಒಡಿಶಾ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಡಿಯೊಂದಿಗಿನ ಮೈತ್ರಿ ಮಾತುಕತೆಗಳು ಒಂದು ಬಿಕ್ಕಟ್ಟನ್ನು ತಲುಪಿದ ನಂತರ, ಎರಡೂ ಕಡೆಯವರು ಪರಸ್ಪರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಈ ಹಿನ್ನೆಲೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ನಮ್ಮ ಸಿದ್ಧತೆಗಳ ಕುರಿತು ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲು ದೆಹಲಿಗೆ ಹೋಗಿದ್ದೆವು. ಸಭೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಅಥವಾ ಸೀಟು ಹಂಚಿಕೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಕೇಂದ್ರ ನಾಯಕರೊಂದಿಗೆ ಚುನಾವಣಾ ಪೂರ್ವ ಮೈತ್ರಿ ವಿಚಾರಗಳ ಕುರಿತು ಚರ್ಚಿಸಲು ದೆಹಲಿಗೆ ಬಂದಿದ್ದ ಬಿಜೆಡಿ ನಾಯಕರಾದ ವಿ.ಕೆ. ಪಾಂಡಿಯನ್ ಮತ್ತು ಪ್ರಣಬ್ ಪ್ರಕಾಶ್ ದಾಸ್ ಕೂಡ ಭುವನೇಶ್ವರಕ್ಕೆ ಯಾವುದೇ ಸಕಾರಾತ್ಮಕ ಫಲಿತಾಂಶವಿಲ್ಲ ಮರಳಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ೧೯೯೮ ಮತ್ತು ೨೦೦೯ ರ ನಡುವೆ ಪಕ್ಷದ ಮೈತ್ರಿ ಪಾಲುದಾರರಾಗಿದ್ದಾರೆ.
ಬಿಜೆಡಿ ೧೪೭ ಒಡಿಶಾ ವಿಧಾನಸಭಾ ಸ್ಥಾನಗಳಲ್ಲಿ ೧೦೦ ಕ್ಕೂ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.”ಬಿಜೆಡಿ ನಮಗೆ ಸ್ವೀಕಾರಾರ್ಹವಲ್ಲದ ಸುಮಾರು ೭೫ ಪ್ರತಿಶತದಷ್ಟು ವಿಧಾನಸಭಾ ಸ್ಥಾನಗಳನ್ನು ಕೇಳುತ್ತಿದೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ರಾಜ್ಯದ ೨೧ ಲೋಕಸಭಾ ಸ್ಥಾನಗಳ ಪೈಕಿ ೧೪ ಸ್ಥಾನಗಳಿಗೆ ಬಿಜೆಪಿಯ ಬೇಡಿಕೆಯನ್ನು ಒಪ್ಪಿಕೊಳ್ಳಲು ಬಿಜೆಡಿ ಸಿದ್ಧವಾಗಿಲ್ಲ ಎನ್ನಲಾಗಿದೆ.