ಒಡಿಯೂರು ಸ್ವಾಮೀಜಿ ಜನ್ಮ ದಿನೋತ್ಸವ-ಆಟೋಟ ಸ್ಪರ್ಧೆ

ಪುತ್ತೂರು,ಜು.೧೮- ಒಡಿಯೂರು ಸ್ವಾಮೀಜಿ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಗುರುದೇವದತ್ತ ಸಂಸ್ಥಾನಮ್ ಜಂಟಿ ಆಶ್ರಯದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಒಡಿಯೂರು ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ ಹಾಗೂ ಗುರುವಂದನೆ ಅಂಗವಾಗಿ ಒಳಾಂಗಣ ಹಾಗೂ ಹೋರಾಂಗಣ ಆಟೋಟ ಸ್ಪರ್ಧೆಗಳಿಗೆ ಭಾನುವಾರ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಚಾಲನೆ ನೀಡಿ, ದೈಹಿಕ, ಮಾನಸಿಕ ಆರೋಗ್ಯದ ಜತೆ ಸಮಾಜದಲ್ಲಿ ಸಾಮರಸ್ಯ ಮೂಡಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ. ಜಿಲ್ಲೆಯಲ್ಲಿ ಅತ್ಯುತ್ತಮ ಹೆಸರು ಪಡೆದಿರುವ ಒಡಿಯೂರು ಸ್ವಾಮೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಶಾರೀರಿಕವಾಗಿ, ಉತ್ತಮ ಮನಸ್ಸು ಜಾಗೃತಿಗೊಳ್ಳಲು ಕ್ರೀಡೆ ಸಹಕಾರಿ. ಈ ನಿಟ್ಟಿನಲ್ಲಿ ಮಕ್ಕಳು ಮೊಬೈಲ್‌ಗಳನ್ನು ಗಮನ ಕೊಡುವುದನ್ನು ಮರೆತು ಇಂತಹಾ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ನಿವೃತ್ತ ಉಪನ್ಯಾಸಕಿ ವತ್ಸಲಾರಾಜ್ಞಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗ್ಡೆ, ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಶುಭ ಹಾರೈಸಿದರು. ವೇದಿಕೆಯಲ್ಲಿ ಸಮಿತಿಯ ಭವಾನಿ ಶಂಕರ, ಜಯಪ್ರಕಾಶ್, ತಾಲೂಕು ಮೇಲ್ವಿಚಾರಕಿ ಸವಿತಾ ಉಪಸ್ಥಿತರಿದ್ದರು. ಶಾಂತಾ ಕುಂಟಿನಿ ಪ್ರಾರ್ಥನೆ ಹಾಡಿದರು. ಕ್ರೀಡಾ ಸಂಚಾಲಕರಾದ ನಯನಾ ರೈ ಸ್ವಾಗತಿಸಿ, ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.