ಒಡಲು ಹಾಗೂ ಹೆಗಲು ಶ್ರೇಷ್ಠಸ್ಥಾನಗಳುಃ ಮನು ಪತ್ತಾರ

ವಿಜಯಪುರ, ಜು.26-ಅಮ್ಮನ ಒಡಲು ಹಾಗೂ ಅಪ್ಪನ ಹೆಗಲು ಅಲ್ಪಾವಧಿಗಾಗಿ ದೊರಕುವ ಎರಡು ಶ್ರೇಷ್ಠ ಹಾಗೂ ಪವಿತ್ರ ಸ್ಥಾನಗಳು. ಇವುಗಳು ಶಾಶ್ವತವಾಗಿ ಲಭ್ಯವಾಗುವ ಸ್ಥಾನಗಳಲ್ಲ. ಹಾಗಾಗಿ ಸ್ಥಾನ ನೀಡಿದ ಎರಡು ಜೀವಗಳ ನೆಮ್ಮದಿಗಾಗಿಯೇ ನಮ್ಮಿಡೀ ಬದುಕು ಸಮರ್ಪಣೆಯಾಗಬೇಕು ಎಂದು ಸರ್ಕಾರಿ ವಸತಿ ನಿಲಯದ ಮೇಲ್ವಿಚಾರಕ, ಸಾಹಿತಿ ಮನು ಪತ್ತಾರ ಅಭಿಪ್ರಾಯಪಟ್ಟರು.
ಅವರು ರವಿವಾರ ಸಂಜೆ ವಿಜಯಪುರ ನಗರದ ಅಥಣಿ ರಸ್ತೆಯ ಸೇನಾ ನಗರದಲ್ಲಿನ ಜಿ.ಸಿ. ಹಿರೇಮಠರ ಆಶೀರ್ವಾದ ನಿಲಯದ ಪ್ರಾಂಗಣದಲ್ಲಿ ಓದುಗರ ಚಾವಡಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 19ನೇ ಮಾಸಿನ ಚಾವಡಿ ಚಿಂತನೆಯಲ್ಲಿ ಸಿಂದಗಿಯ ಹೆಸರಾಂತ ಸಾಹಿತಿ ಶಶಿಕಲಾ ವೀರಯ್ಯಸ್ವಾಮಿ ಇವರ ‘ಅಪ್ಪ ಮತ್ತು ಮಣ್ಣು’ ಕೃತಿಯನ್ನು ಪರಿಚಯಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ಹೆಣ್ಣು ಮಕ್ಕಳು ಕಾಲೇಜಿಗೆ ಹೋಗುವುದೇ ಒಂದು ಮಹಾ ಅಪರಾಧ ಎಂದು ಬಿಂಬಿತವಾಗುತ್ತಿದ್ದಂತಹ ಕಾಲದಲ್ಲಿ ಬದುಕನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಎದುರಾದ ಎಲ್ಲ ಎಡರು-ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಒಬ್ಬ ಕವಯಿತ್ರಿ ಹಾಗೂ ಲೇಖಕಿಯಾಗಿ ಸಾಹಿತ್ಯಾಸಕ್ತರ ಮತ್ತು ಮನುಷ್ಯರ ಅಂತಸತ್ವವನ್ನು ತಟ್ಟಿ ಕಟ್ಟಿಕೊಟ್ಟ ಹೆಮ್ಮೆಯ ಲೇಖಕಿ ಶಶಿಕಲಾರವರು. ಅವರ ಅಪ್ಪ ಮತ್ತು ಮಣ್ಣು ಕೃತಿಯನ್ನು ಓದುವಾಗ ಪ್ರತಿಯೊಬ್ಬರು ಭಾವಪರವಶರಾಗುವುದು ಖಂಡಿತ. ಅಪ್ಪನಿಲ್ಲದ ಹೊತ್ತಲ್ಲಿ ಸಿಹಿಯೇಕೆ ಉಣ್ಣುವುದು ಎಂದು ಬಂಡಾಯವಾದವರು, ಮರಳುಗಾಡಿನಲಿ ಹರಿಯುವ ನದಿ ನಾನು ಎಂದು ಜೀವನೋತ್ಸಾಹ ಹೀಗೂ ಎಂದು ಹೇಳಿದವರು, ಬೆಟ್ಟದಷ್ಟಿರುವ ನನ್ನ ಕಷ್ಟಗಳನ್ನೆಲ್ಲಾ ಸುಟ್ಟರೂ ಮಡಕೆಯಾಗಿ ನಾ ಮತ್ತೆ ಬರುವೆ, ಸಿಹಿನೀರನು ನನ್ನೊಳಗೆ ಸೇರಿಸಿಕೊಂಡು ಕೊಡುವೆ ಎಂದು ಹೇಳಿದವರು ಶಶಿಕಲಾ ವೀರಯ್ಯಸ್ವಾಮಿ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಚಾವಡಿ ಬಳಗದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಬಿರಾದಾರ್ ಮಾತನಾಡಿ, ಅಪ್ಪ ಇದ್ದಾಗ ಅಪ್ಪನ ಮಹತ್ವ ಬಹುತೇಕರಿಗೆ ತಿಳಿಯದು. ಮಕ್ಕಳು ಅಪ್ಪನನ್ನು ಇದ್ದಾಗ ಅರಿಯಲು ಹೋಗುವುದಿಲ್ಲ. ಕೇವಲ ಅಪ್ಪನಿಂದ ಪಡೆಯುವುದು ಮಾತ್ರವೇ ಮಕ್ಕಳ ಮುಖ್ಯ ಧ್ಯೇಯವಾಗಿಬಿಟ್ಟಿರುತ್ತದೆ. ಅಪ್ಪನೆಂಬ ನಿಸ್ವಾರ್ಥ ಜೀವ ದೂರ ಹೋದಾಗಲೇ ಅವನ ಅಸ್ತಿತ್ವದ ಪರಿಚಯವಾಗುವುದು ಹಾಗೂ ಮನಸ್ಸು ಅಪ್ಪನ ಹಿಡಿಪ್ರೀತಿಗಾಗಿ ಹಂಬಲಿಸಿ ಪರಿತಪಿಸುವುದು. ಈ ನಿಟ್ಟಿನಲ್ಲಿ ಶಶಿಕಲಾರವರು ನಮ್ಮ ಹೆಮ್ಮೆಯ ಸಾಹಿತಿಗಳಲ್ಲೊಬ್ಬರಾಗಿ, ರವಿ ಬೆಳಗೆರೆ ಇತ್ಯಾದಿ ಧೀಮಂತರ ಜೊತೆ ಕೆಲಸಗೈದು, ಉಪನ್ಯಾಸಕಿಯಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿಯೂ ಸೇವೆಗೈದು ಕನ್ನಡ ಸಾರಸ್ವತ ಲೋಕಕ್ಕೆ ಅಪರೂಪದ ಕಾಣಿಕೆಗಳನ್ನು ನೀಡಿದ್ದಾರೆ. ಓದುಗರ ಚಾವಡಿಯ ಪ್ರಮುಖ ಉದ್ದೇಶವೇ ಗಟ್ಟಿ ಸಾಹಿತಿಗಳ ಸಾಹಿತ್ಯವನ್ನು ಪರಿಚಯಿಸುವುದಾಗಿದೆ ಎಂದು ನುಡಿದರು.
ಅಧ್ಯಕ್ಷತೆಯನ್ನು ಚಾವಡಿಯ ಅಧ್ಯಕ್ಷ ಬಿ.ಆರ್. ಬನಸೋಡೆ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಸಾವಿತ್ರಿ ಹಿರೇಮಠ ಉದ್ಘಾಟಿಸಿದರು. ವೇದಿಕೆಯ ಮೇಲೆ ಶರಣಬಸಯ್ಯ ಮಠ, ಶರಣು ಸಬರದ, ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ ಮತ್ತಿತರರು ಇದ್ದರು.
ಈ ಕಾರ್ಯಕ್ರಮದಲ್ಲಿ ಶೋಭಾ ಚವ್ಹಾಣ, ಶಾಂತಾ ಕಪಾಳೆ, ಸುನಿತಾ ಉಮರಾಣಿ, ರತ್ನಾ ಮಠ, ಗುರುಬಸಯ್ಯ ಹಿರೇಮಠ, ಡಾ. ಎಮ್.ಎಸ್. ಮಾಗಣಗೇರಿ, ಸುಭಾಸ ಯಾದವಾಡ, ಮಯೂರ ತಿಳಗುಳಕರ, ಶರಣಗೌಡ ಪಾಟೀಲ, ರಾಮಣ್ಣ ಶಿರಗುಪ್ಪ ಮತ್ತಿತರರು ಉಪಸ್ಥಿತರಿದ್ದರು.