ಒಗ್ಗಟ್ಟಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ಪತ್ತಾರ

ಸಂಜೆವಾಣಿ ವಾರ್ತೆ
ಗಂಗಾವತಿ ಸೆ 18 : ಸಮಾಜ ಸಂಘಟನೆ ಕಷ್ಟದ ಕೆಲಸ, ನೋವು ನಲಿವುಗಳನ್ನು ಸಮನಾಗಿ ತೆಗೆದುಕೊಂಡಾಗ ಸಂಘಟನೆ ಗಟ್ಟಿಯಾಗುತ್ತದೆ. ಎಲ್ಲರೂ ಒಗ್ಗಟ್ಟಾಗದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವಿಶ್ವಕರ್ಮ ಸಮಾಜದ ಮುಖಂಡರಾದ ನಾಗಲಿಂಗಪ್ಪ ಪತ್ತಾರ ಸಲಹೆ ನೀಡಿದರು.
ಅವರಿಂದು ವಡ್ಡರಹಟ್ಟಿ ಗ್ರಾಮದ ಕೊಪ್ಪಳ ರಸ್ತೆಯ ಉಳ್ಳಿಡಗ್ಗಿಯಲ್ಲಿರುವ ಶ್ರೀ ಬನ್ನಿಮಹಾಂಕಾಳಮ್ಮ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಹಾಗೂ ಶ್ರೀ  ವಿಶ್ವಕರ್ಮ ಸಮಾಜ ಸೇವಾ ಸಮಿತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ನೂತನ ಸಮಿತಿ ರಚನೆ ಮಾಡಿದ್ದು ಸಂತಸ ತಂದಿದೆ. ಅದರಲ್ಲೂ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಮಹಿಳೆಯರ ಕೂಡ ಸಮಾಜದ ಅಭಿವೃದ್ಧಿಯಲ್ಲಿ ಭಾಗಿಯಾಗಲು ಸಂಘವನ್ನು ರಚಿಸಿಕೊಳ್ಳುವಂತೆ ತಿಳಿಸಿದರು. ಸಮಾಜದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸಂದರ್ಭದಲ್ಲಿ ತಮ್ಮ ಬೆಂಬಲ, ಸಹಕಾರ ನೀಡುವುದಾಗಿ ತಿಳಿಸಿದರಲ್ಲದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನದ ವ್ಯವಸ್ಥೆ ಮಾಡಿಕೊಂಡರೆ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಮಟ್ಟದಲ್ಲಿ ಅನುದಾನ ಕೊಡಿಸುವ ಭರವಸೆ ನೀಡಿದರು.
ನಂತರ ಸಮಿತಿಯ ಅಧ್ಯಕ್ಷ ವಿನಾಯಕ ಚೊಳಚಗುಡ್ಡ ಅವರು ಮಾತನಾಡಿ, ಅಮರಶಿಲ್ಪಿ ಜಕಣಚಾರಿಯವರ ಜಯಂತಿಯಂದು ಮಾಡಿದ ಸಮಿತಿ ರಚನೆಯ ಸಂಕಲ್ಪ ಇಂದು ಸಾಕಾರಗೊಂಡಿದೆ. ಸಮಾಜದ ಅಭಿವೃದ್ಧಿಗೆ ತಾವು ಸದಾ ಸಿದ್ಧರಿದ್ದು, ಸಮಾಜದ ಜನತೆಗೆ ಒಗ್ಗಟ್ಟಾಗಿ ಸಹಕರಿಸುವಂತೆ ಮನವಿ ಮಾಡಿದರು.
ಬಳಿಕ ಸಮಿತಿಯ ನಿರ್ದೇಶಕರು, ವಾಸ್ತುಸಲಹೆಗಾರರಾದ ಗುಂಡಪ್ಪಾಚಾರ್ ಅವರು ಮಾತನಾಡಿ, ವಿಶ್ವಕರ್ಮ ಜನಾಂಗದವರು ತಮ್ಮ ವೃತ್ತಿಯಿಂದ ಜಾಣರಾಗಿದ್ದಾರೆ. ಆದರೆ ಸರ್ಕಾರದ ಸೌಲಭ್ಯ, ಉತ್ತಮ ಶಿಕ್ಷಣ ಪಡೆಯುವಲ್ಲಿ ಹಿಂದುಳಿದಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಮೂಲಕ ನಮಗೆ ದೊರಕಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಸಮಿತಿಯ ಸಹಕಾರ್ಯದರ್ಶಿ ನಾಗಲಿಂಗಚಾರ್ಯ ಪತ್ತಾರ ಪ್ರಾಸ್ತವಿಕ ಮಾತನಾಡಿ, ಜ.1ರಂದು ಅಮರಶಿಲ್ಪಿ ಜಕಣಾಚಾರಿಯವರ ಜಯಂತಿ ಆಚರಣೆ ಮಾಡಲು ಡಿ.31ರಂದು ಆದೇಶ ಹೊರಡಿಸಿತ್ತು. ಆ.1ರಂದು ಅಮರಶಿಲ್ಪಿ ಜಕಣಾಚಾರಿಯವರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಗುರು-ಹಿರಿಯರ ಮುಂದೆ ಸಮಾಜ ಸಂಘಟನೆ ಬಗ್ಗೆ ಚರ್ಚಿಸಿದಾಗ ಸರ್ವರೂ ಒಮ್ಮತದಿಂದ ಒಪ್ಪಿ ಸಮಿತಿ ರಚನೆಗೆ ಮುಂದಾಗಿ ಸಮಾಜದವರೆಲ್ಲರೊಂದಿಗೆ ಚರ್ಚಿಸಿ, ವಡ್ಡರಹಟ್ಟಿ ಗ್ರಾ.ಪಂ ವ್ಯಾಪ್ತಿಯ ವಡ್ಡರಹಟ್ಟಿ ಕ್ಯಾಂಪ್, ಆರ್ಹಾಳ, ಗುಡ್ಡದಕ್ಯಾಂಪ್, ಗದ್ವಾಲ್ ಕ್ಯಾಂಪ್‍ನ ಜನರನ್ನೊಳಗೊಂಡು ಇಂದು ಶ್ರೀ ವಿಶ್ವಕರ್ಮ ಸಮಾಜ ಸಮಿತಿ ರಚನೆಯಾಗಿದೆ. ಸರ್ವರೂ ಸಮಾಜದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಮಹಿಳಾ ಮುಖಂಡರಾದ ನಾಗವೇಣಿ ಬಿ.ಬಡಿಗೇರ್, ಭುವನೇಶ್ವರಿ ಪಂಪಾಪತಿಯವರು ಮಾತನಾಡಿ, ಮಹಿಳೆಯರಿಗೂ ಸಂಘಟನೆಯಲ್ಲಿ ತೊಡಗುವಂತೆ ಮುಖಂಡರಾದ ನಾಗಲಿಂಗಪ್ಪ ಪತ್ತಾರ ಅವರು ಸಲಹೆ ನೀಡಿರುವದು ಸಂತಸ ತಂದಿದೆ. ಗ್ರಾಮದ ಮಹಿಳೆಯರೆಲ್ಲರೂ ವಿಶ್ವಕರ್ಮ ಸಮಾಜ ಸೇವಾ ಸಮಿತಿಯೊಂದಿಗೆ ಮಹಿಳೆಯರ ಸಮಿತಿಯನ್ನು ರಚನೆ ಮಾಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಅರ್ಚಕ ದೇವೇಂದ್ರಪ್ಪ ಬಡಿಗೇರ್ ಅವರು ಶ್ರೀ ವಿಶ್ವಕರ್ಮ ಪೂಜೆ ನೆರವೇರಿಸಿದರು. ಶ್ರೀಮತಿ ಪೂಜಾ ಮಂಜುನಾಥ ಚೊಳಚಗುಡ್ಡ ಅವರು ಪ್ರಾರ್ಥನೆಗೈದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಬಿ.ಆರ್.ಬಡಿಗೇರ್, ಕಾರ್ಯದರ್ಶಿ ಮಹೇಶ ಪತ್ತಾರ, ಖಜಾಂಚಿ ವಿರುಪಾಕ್ಷಾಚಾರ್, ನಿರ್ದೇಶಕರಾದ ರುದ್ರೇಶ ಬಡಿಗೇರ್, ಸತ್ಯನಾರಾಯಣ ಬಡಿಗೇರ, ಗಂಗಾಧರ ಬಡಿಗೇರ್, ಪ್ರಭಾಕರ್ ಬಡಿಗೇರ್ ಸೇರಿದಂತೆ ವಡ್ಡರಹಟ್ಟಿ, ವಡ್ಡರಹಟ್ಟಿ ಕ್ಯಾಂಪ್, ಆರ್ಹಾಳ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡರು, ಗುರು-ಹಿರಿಯರು, ಯುವಕರು, ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.