ಒಗ್ಗಟ್ಟಿನಿಂದ ಏನೂ ಬೇಕಾದರೂ ಸಾಧಿಸಬಹುದು

ಕಲಬುರಗಿ:ಆ.14: ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಿಂದ ಏನೂ ಬೇಕಾದರೂ ಸಾಧಿಸಬಹುದಾಗಿದೆ ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಇಲ್ಲಿನ ಶ್ರೀ ಶರಣ ಹರಳಯ್ಯ ಸಮುದಾಯ ಭವನದಲ್ಲಿ ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುರಪುರ ಐತಿಹಾಸಿಕವಾಗಿ ಹೆಸರಾಗಿದ್ದು ಅಲ್ಲದೆ ಒಗ್ಗಟ್ಟಿಗೂ ಹೆಸರಾಗಿದೆ. ಅಂತಹ ಒಗ್ಗಟ್ಟು ದೂರದ ಕಲಬುರಗಿಯಲ್ಲಿರುವ ಸುರಪುರ ನಿವಾಸಿಗಳು, ಇಲ್ಲಿಯೂ ತೋರಿಸಿದ್ದು ಸಂತೋಷವನ್ನುಂಟು ಮಾಡಿದೆ. ನನ್ನ ತಾಲೂಕಿನ ಜನರು ಇಲ್ಲಿ ಸೇರಿದ್ದು ನೋಡಿದರೆ, ನಾನು ಈಗ ಕಲಬುರಗಿಯಲ್ಲಿ ಇಲ್ಲ. ಸುರಪುರದ ಯಾವುದೋ ಒಂದು ಬಡಾವಣೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ನೆಲೆಸಿರುವ ಸುರಪುರ ತಾಲೂಕಿನ ಹಳ್ಳಿಯ, ನಗರದ ಜನರು ಸೇರಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ದೊಡ್ಡ ಸಾಧನೆ. ಅದಲ್ಲರೂ ತಾಲೂಕಿನ ಎಲ್ಲಾ ಜನರನ್ನು ಸೇರಿಸಿದ್ದು, ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಿದ್ದು ಸುರಪುರ ತಾಲೂಕಿನ ಮಣ್ಣಿನ ಮಹಿಮೆಯನ್ನು ಎಲ್ಲರಿಗೂ ತೋರಿಸಿದ್ದು ಮಾದರಿಯಾಗಿದೆ. ಎಲ್ಲಾ ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡಿದಂತಾಗಿದೆ ಎಂದು ಹೇಳಿದರು.
ಕಲಬುರಗಿಯಲ್ಲಿ ನೆಲೆಸಿರುವ ನಮ್ಮ ತಾಲೂಕಿನ ಎಲ್ಲಾ ಭಾಂದವರು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ, ಅವರ ಅಭಿವೃದ್ಧಿಗೆ ನನ್ನ ಕೈಲಾದ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಹೈದ್ರಾಬಾದ ಉನ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಲಿಂಗಪ್ಪ ಗೋನಾಲ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ,ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಸುರಪುರ ತಾಲೂಕು ತನ್ನದೆ ಆದ ಇತಿಹಾಸ ಹೊಂದಿದೆ. ಇಲ್ಲಿನ ಪರಿಸರ ಸಂಸ್ಕøತಿ ಆಚಾರ-ವಿಚಾರಗಳು ಮುಂದಿನ ಪಿಳಿಗೆಗೆ ತಿಳಿಸುವ ಮತ್ತು ಶ್ರೀಮಂತಿಕೆಯನ್ನು ಉಳಿಸಿಕೊಂಡು ಹೋಗುವ ಅಗತ್ಯ ಇದೆ. ಇದಕ್ಕಾಗಿ ಸುರಪುರದಲ್ಲಿ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಸ್ಥಾಪಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಸಂಘದ ಗೌರವಾಧ್ಯಕ್ಷ ಎಸ್.ಡಿ.ಕಟ್ಟಿಮನಿ ಮಾತನಾಡಿ, ನಾವು ಎಲ್ಲೆ ಹೋದರು, ನಾವು, ನಮ್ಮವರು ಎಂಬ ಮನೋಭಾವನೆ ಬೆಳೆಸುವುದು, ದೂರದಿಂದ ಬಂದು ಇಲ್ಲಿ ನೆಲೆಸಿರುವ ಎಲ್ಲರೂ ಒಂದು ಕಡೆ ಸೇರಿ, ಅಂತಃಕರಣದ ಮನೋಭಾವನೆ ಪುನರುಜ್ಜೀವನಗೊಳಿಸುವ ಹಿನ್ನಲೆಯಲ್ಲಿ ಈ ಸಂಘವನ್ನು 2017ರಲ್ಲಿ ರಾಜಾ ಮದನಗೋಪಾಲ ನಾಯಕ ಅವರಿಂದ ಉದ್ಘಾಟಿಸಿ, ಪ್ರಾರಂಭಿಸಲಾಯಿತು ಎಂದು ಸಂಘ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ನಿವೃತ್ತ ಎಸ್.ಪಿ. ಚಂದ್ರಕಾಂತ ಎನ್.ಭಂಡಾರೆ ಅವರು ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡಿ, ಶಾಸಕರು ಅವುಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರಪುರ ತಾಲೂಕಿನ ಹಿರಿಯ ಸಾಧಕರಾ ನಿವೃತ್ತ ಪ್ರಾಂಶುಪಾಲ ಬಸವರಾಜ ನಿಷ್ಠಿ ದೇಶಮುಖ, ನಿವೃತ್ತ ಮುಖ್ಯಗುರು ವೀರಪ್ಪ ಆವಂಟಿ, ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ವೈದ್ಯ ಬಸವಯೋಗಿ ಗುಳಗಿ, ಡಾ.ಮಲ್ಲೇಶಪ್ಪ ಮಿಣಜಿಗಿ, ಜಗನ್ನಾಥ ರಫಗಾರ, ಕೇದಾರನಾಥ ಶಾಸ್ತ್ರಿ ಸೇರಿದಂತೆ ಅನೇಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಪಿಯು.ಸಿ. ಹಾಗೂ ಎಸ್.ಎಸ್.ಎಲ್‍ಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚನ್ನಬಸವರಾಜ ನಿಷ್ಠಿ ದೇಶಮುಖ, ಕಾರ್ಯದರ್ಶಿ ವಿ.ಡಿ.ಪಾಟೀಲ್, ಖಚಾಂಚಿ ನಾಗರಾಜ ಜಮದ್ರಖಾನಿ, ವಿಜಯಕುಮಾರ ಪಾಟೀಲ್, ರಾಘವೇಂದ್ರ ಗುಡಗುಂಟಿ, ನಾಗರಾಜ ಸುರಪುರ, ತೇಜಸಿಂಗ ಹಜಾರೆ, ಯಂಕಪ್ಪ ನೀರಡಗಿ, ಚಂದಪ್ಪ ಯಮನೂರು, ಲಕ್ಷ್ಮಣ ಗುತ್ತೇದಾರ್, ಬಾಲಕೃಷ್ಣ ಸಾಲವಾಡಗಿ, ರವೀಂದ್ರ ದೋಶೆಟ್ಟಿ ಈಶ್ವರಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಶಾಸ್ತ್ರಿ, ಶ್ರೀಮತಿ ಶಹನಾಜ ಬೇಗಂ, ಮುರಳಿಧರ ಕರಗಿಲಕರ್, ಈಶ್ವರ ಕಟ್ಟಿಮನಿ ಇದ್ದರು. ಜಿ.ಜಿ.ವಣಿಕ್ಯಾಳ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಸುರಪುರ ವಂದಿಸಿದರು. ಡಾ.ಸುನಂದ ಸಾಲವಾಡಗಿ ಹಾಗೂ ಕಲಾವಿದರು ಪ್ರಾರ್ಥನಾ ಗೀತೆ ಹಾಡಿದರು.


ಸುರಪುರ ತಾಲೂಕಿನ ಹಳ್ಳಿ ಹಾಗೂ ಪಟ್ಟಣದಿಂದ ಉದ್ಯೋಗ, ವ್ಯಾಪಾರ ಸೇರಿದಂತೆ ವಿವಿಧ ಕಾರಣಗಳಿಂದ ಬಂದು ಬಂದು ಕಲಬುರಗಿಯಲ್ಲಿ ಸಾವಿರಾರು ಜನರು ಬಂದು ನೆಲೆಸಿದ್ದಾರೆ. ಅವರೆಲ್ಲರನ್ನು ಒಂದಡೆ ಸೇರಿಸಲು ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಲಾಗಿದೆ. ತಾಲೂಕಿನ ಜನರು ಗೌರವಯುತ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡು ಸಾಧಕರಾಗಿ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ನಮ್ಮ ತಾಲೂಕಿನ ಶಾಸಕರನ್ನು ಕರೆಸಿ ಅವರಿಂದ ಇವರಿಗೆ ಗೌರವಿಸಿದ್ದು ಸಂಭ್ರಮವನ್ನುಂಟು ಮಾಡಿದೆ. ನಮ್ಮ ಬಾಂಧವ್ಯ ಹೀಗೇ ಮುಂದುವರೆಯಲಿ.
-ಪ್ರೊ.ಬಿ.ಪಿ..ಹೂಗಾರ
-ಅಧ್ಯಕ್ಷರು, ಕ್ಷೇಮಾಭಿವೃದ್ಧಿ ಸಂಘ, ಕಲಬುರಗಿ