ಒಗ್ಗಟ್ಟಿನಿಂದಲೇ ದೇಶದ ಅಭಿವೃದ್ಧಿ

ವಿಜಯಪುರ.ಮೇ೨೭:ಎನ್‌ಎಸ್‌ಎಸ್ ಶಿಬಿರದ ಉದ್ದೇಶ ಸ್ವಯಂಸೇವಕರ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿ ಗೊಳಿಸುವು ದಾಗಿದೆ ಎಂದು ಬೆಂಗಳೂರಿನ ಬಮೂಲ್ ನ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಬಿ.ಶ್ರೀನಿವಾಸ್ ತಿಳಿಸಿದರು.
ಇವರು ಹೋಬಳಿಯ ಇರಿಗೇನಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಚಿಕ್ಕಮರಳಿಯ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಏಳು ದಿನಗಳ ಎನ್‌ಎಸ್‌ಎಸ್ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಎನ್‌ಎಸ್‌ಎಸ್ ಶಿಬಿರದಿಂದ ರಾಷ್ಟ್ರೀಯತೆ, ಭಾವ್ಯೆಕ್ಯತೆ, ಸಹಬಾಳ್ವೆ ಹಾಗೂ ನಾಯಕತ್ವ ಗುಣ ಬೆಳೆಯುತ್ತದೆ ಇದರಿಂದ ಯುವಕ ರಲ್ಲಿ ಸೇವಾ ಮನೋಭಾವನೆಯ ಜತೆಗೆ ವೈಜ್ಞಾನಿಕತೆಯೂ ರೂಪು ಗೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಚಿಕ್ಕಮರಳಿಯ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಪ್ರಾಂಶುಪಾಲೆ ಡಾ.ಎನ್. ಆನಂದಮ್ಮ ಮಾತನಾಡಿ ಎನ್‌ಎಸ್‌ಎಸ್ ಶಿಬಿರದಿಂದ ರಾಷ್ಟ್ರೀಯ ಭಾವ್ಯೆಕ್ಯತೆ ಹಾಗೂ ವ್ಯಕ್ತಿತ್ವ ವಿಕಸನದ ಅಭಿವೃದ್ಧಿ ಸಾಧ್ಯ ಸ್ವಯಂಸೇವಕರಲ್ಲಿ ವ್ಯೆಜ್ಞಾನಿಕ ಮನೋಭಾವನೆ ಬೆಳೆಯಲು ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ. ರಾಷ್ಟ್ರಪ್ರೇಮ, ದೇಶಭಕ್ತಿ ಬೆಳೆಯುವುದರ ಜೊತೆಗೆ ವೈಜ್ಞಾನಿಕ ಚಿಂತನೆಗಳ ಕುರಿತು ಚರ್ಚಿಸಬಹುದಾಗಿದೆ ಮತ್ತು ಯುವ ಜನತೆ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತದೆ ಆದ್ದರಿಂದ ವಿದ್ಯಾರ್ಥಿಗಳು ದೇಶದ ಆರ್ಥಿಕ ಭದ್ರತೆ ಕುರಿತು ವಿಶ್ಲೇಷಣೆ ಮಾಡುವ ಎಲ್ಲಾ ಅವಕಾಶಗಳನ್ನು ಈ ವಿಶೇಷ ಶಿಬಿರದಲ್ಲಿ ಕಲ್ಪಿಸಲಾಗಿದೆ ಇದನ್ನು ಯುವ ಜನತೆ ಸದ್ಭಳಕ್ಕೆ ಮಾಡಿಕೊಂಡರೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಶಿಬಿರದ ಉದ್ದೇಶ: ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಹಾಗೂ ಶಿಬಿರ ಅಧಿಕಾರಿ ವಿ.ವಿಶ್ವಾಸ್ ಮಾತನಾಡಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ. ವಿಜಯಕುಮಾರ್ ಮತ್ತು ನಾಗಾರ್ಜುನ ವಿದ್ಯಾ ಸಂಸ್ಥೆಯ ನಿರ್ದೇಶಕ ಪ್ರೊ. ಮನೋಹರ ನಾರಜ್ಜಿ ಇವರುಗಳ ನಿರ್ದೇಶನದಲ್ಲಿ ಈ ಏಳು ದಿನಗಳ ವಿಶೇಷ ಶಿಬಿರದಲ್ಲಿ ಎನ್.ಎಸ್.ಎಸ್. ಧ್ವಜಾರೋಹಣ, ಪ್ರತಿಜ್ಞಾವಿಧಿ ಸ್ವೀಕಾರ, ಸಮೂಹ ಗೀತೆಗಳ ಗಾಯನ,ಗ್ರಾಮ ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ, ಜಾತ,ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಜನತೆಗೆ ತಿಳಿಸುವುದು, ರಕ್ತದಾನದ ಮಹತ್ವ ಮತ್ತು ಅರಿವು, ಪ್ಲಾಸ್ಟಿಕ್ ನಿರ್ಮೂಲನೆ, ಮಳೆ ನೀರು ಸಂರಕ್ಷಣೆ, ಸ್ವಯಂಸೇವಕರಿಗೆ ನಾಯಕತ್ವ ತರಬೇತಿ, ಯೋಗ ಹಾಗೂ ಸಮೂಹ ಕ್ರೀಡೆಗಳು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಇರಿಗೇನಹಳ್ಳಿಯ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಚನ್ನಕೇಶವ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಉಪನ್ಯಾಸಕರಾದ ಡಾ. ಕಿರಣ್ ಕುಮಾರ್, ದೀಪಿಕಾ, ಶೃತಿ, ದೈಹಿಕ ಶಿಕ್ಷಣ ನಿರ್ದೇಶಕ ಗುರುರಾಜ್, ಹಿರಿಯ ಎನ್.ಎಸ್.ಎಸ್. ಸ್ವಯಂ ಸೇವಕ ಮನೋಜ್,ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಮತ್ತು ಇರಿಗೇನಹಳ್ಳಿಯ ಗ್ರಾಮಸ್ಥರು ಹಾಜರಿದ್ದರು.