ಒಗ್ಗಟ್ಟಿಗೆ ಗೆಲುವು; ಡಿಕೆಶಿ

ಬೆಂಗಳೂರು,ನ.೭- ಒಗ್ಗಟ್ಟಿನಿಂದ ಚುನಾವಣೆಗಳನ್ನು ಎದುರಿಸಿದರೆ ಗೆಲುವು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದಕ್ಕೆ ಹಾನಗಲ್ ಉಪಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು. ಆದರೆ, ಸಿಂಧಗಿಯಲ್ಲಿ ಸೋತೆವು, ಇದಕ್ಕೆ ಕಾರಣ ಪಕ್ಷದ ಸ್ಥಳೀಯ ಮುಖಂಡರ ಒಗ್ಗಟ್ಟಿನ ಕೊರತೆ ಎಂದರು.
ಯಾವುದೇ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದರೆ ಗೆಲುವು ಖಚಿತ ಎನ್ನುವುದು ಉಪಚುನಾವಣೆಗಳು ತೋರಿಸಿವೆ. ಒಗ್ಗಟ್ಟಿಲ್ಲದಿದ್ದರೆ ಸಿಂದಗಿ ಚುನಾವಣೆ ಫಲಿತಾಂಶ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಮುಂದೆ ಬಿಬಿಎಂಪಿ ಚುನಾವಣೆಗಳು ಬರಲಿದ್ದು, ಈ ಚುನಾವಣೆಗೆ ಈಗಿನಿಂದಲೇ ಒಗ್ಗಟ್ಟಾಗಿ ಚುನಾವಣೆ ಸಿದ್ಧತೆಗಳನ್ನು ನಡೆಸೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.