ಒಗ್ಗಟ್ಟಾಗಿ ಗ್ರಾಮಾಭಿವೃದ್ಧಿಗೆ ಮುಂದಾಗಿ : ಶಾಸಕ ಪರಣ್ಣ ಮುನವಳ್ಳಿ


ಗಂಗಾವತಿ : ಗ್ರಾಮ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಶಾಸಕರಾದ ಪರಣ್ಣ ಮುನವಳ್ಳಿ ಹೇಳಿದರು.  ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ  ಭಾರತ ನಿರ್ಮಾಣ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿಯೇ ವಡ್ಡರಹಟ್ಟಿ ಬಹುದೊಡ್ಡ ಪಂಚಾಯತಿಯಾಗಿದೆ. ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗ್ರಾಮದ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಶಿಕ್ಷಣ ಕಾಶಿ ಎಂದೇ ವಡ್ಡರಹಟ್ಟಿ ಗ್ರಾಮ ಹೆಸರು ಪಡೆಯುತ್ತಿದೆ ಎಂದು ಬಣ್ಣಿಸಿದರು. ನರೇಗಾದಡಿ ಭಾರತ ನಿರ್ಮಾಣ ಸೇವಾ ಕೇಂದ್ರ ನಿರ್ಮಾಣವಾಗಿದ್ದು, ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಆಸ್ತಿಗಳ ಸೃಜನೆಯಾಗುತ್ತಿವೆ ಎಂದರು. ಉದ್ಯಮಿಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ಸೂರಿಬಾಬು ನೆಕ್ಕಂಟಿ ಅವರು ಮಾತನಾಡಿ, ಇಡೀ ರಾಜ್ಯದಲ್ಲಿಯೇ ಯಾವ ಗ್ರಾಮ ಪಂಚಾಯತ್ ಮಟ್ಟದಲ್ಲಿ ಐದು ಪಿಯು ಕಾಲೇಜುಗಳಿಲ್ಲ. ವಡ್ಡರಹಟ್ಟಿ ಗ್ರಾಮದಲ್ಲಿ ಐದು ಪಿಯು ಕಾಲೇಜು, ಎರಡು ಡಿಗ್ರಿ ಕಾಲೇಜುಗಳಿವೆ. ಶೈಕ್ಷಣಿಕವಾಗಿ ಗ್ರಾಮ ಹೆಸರು ಮಾಡುತ್ತಿದೆ. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಬೇಕು, ಯಾರೊಬ್ಬರು ರಸ್ತೆ ಜಾಗ ಒತ್ತುವರಿ ಮಾಡಬಾರದು ಎಂದು ಮನವಿ ಮಾಡಿದರು. ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ  ಗಂಗಮಾಳಮ್ಮ ನಿಂಗಪ್ಪ, ಉಪಾಧ್ಯಕ್ಷರಾದ ಹುಲಿಗೆಮ್ಮ ರಮೇಶ ಕಾಳಿ, ಗ್ರಾಪಂ ಪಿಡಿಓ ಕಾಶಿನಾಥ ಹಂಚಿನಾಳ, ಕಾರ್ಯದರ್ಶಿಗಳಾದ ಈಶಪ್ಪ, ತಾಂತ್ರಿಕ ಸಂಯೋಜಕರಾದ ಬದವರಾಜ ಜಟಗಿ, ತಾಂತ್ರಿಕ ಸಹಾಯಕರಾದ ಪ್ರವೀಣ್ ಗದಗ, ಗ್ರಾಮದ ಮುಖಂಡರಾದ ಸಣ್ಣ ರಾಮಣ್ಣ ನಾಯಕ, ಗಡ್ಡಿ ಯಮನಪ್ಪ, ಟಿ.ದುರಗಪ್ಪ, ಗಡ್ಡಿ ನಾಗೇಶಪ್ಪ, ಸಿದ್ದಪ್ಪ ನಾಯಕ ಹಾಗೂ ಗ್ರಾ.ಪಂ. ಸದಸ್ಯರು , ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.