
ಬೆಂಗಳೂರು, ಮಾ. ೨೫- ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ರವರು ಒಕ್ಕಲಿಗರ ಸಂಘದ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿ ಸಂಘದ ಸರ್ವ ನಾಶಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಇಬ್ಬರು ನಾಯಕರು ಹೇಳಿದಂತೆ ನಾನು ಕೇಳಲಿಲ್ಲ ಎಂಬ ಕಾರಣಕ್ಕಾಗಿ ನನ್ನನ್ನು ಅಪರಾಧಿ ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ದೂರಿದರು.
ಈ ಮಹಾನ್ ನಾಯಕರು ಮಾಡಿದ ಕೆಲಸಗಳಿಂದ ಒಕ್ಕಲಿಗರ ಸಂಘ ಮರುಭೂಮಿಯಂತಾಗಿದೆ. ಸಂಘದ ಆಸ್ತಿ ಪರರ ಪಾಲಾಗುವಂತೆ ಮಾಡಿದ್ದಾರೆ. ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿಕೊಂಡು ಹೇಳುವುದಾ- ಕೇಳುವವರು ಯಾರು ಇಲ್ಲದಂತಹ ವ್ಯವಸ್ಥೆಗೆ ಕಾರಣೀಭೂತರಾಗಿದ್ದಾರೆ ಎಂದು ಅವರು ದೂರಿದರು.
ನನ್ನ ಅವಧಿಯಲ್ಲಿ ಯಾವುದೇ ರೀತಿಯ ಅಕ್ರಮ ಅವ್ಯವಹಾರಗಳು ನಡೆದಿಲ್ಲ. ದಾಖಲೆಗಳಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಬಹುದು ಎಂದವರು ಹೇಳಿದರು.
ಸಂಘದ ಜಮೀನು ಬಿಟ್ಟು ಕೊಡುವಂತೆ ಹೆಚ್ಡಿಕೆಯವರು ಮೂರು ಬಾರಿ ಅವರ ಮನೆಗೆ ಕರೆದು ತಾಕೀತು ಮಾಡಿದ್ದರು. ಈ ಸಂದರ್ಭದಲ್ಲಿ ಜಮೀನಿನ ಮೇಲೆ ಕಣ್ಣು ಹಾಕಿದ್ದ ಮರಿಯಪ್ಪನ ಪಾಳ್ಯದ ಶಿವಕುಮಾರ್ ಅವರ ಜೊತೆಯಲ್ಲಿದ್ದದು ಕಂಡು ದಿಗ್ಭ್ರಮೆಯಾಯಿತು.
ಅಷ್ಟೇ ಅಲ್ಲದೆ ನಿವೃತ್ತ ನ್ಯಾಯಮೂರ್ತಿಗಳಿಂದಲೂ ಒತ್ತಡ ಹೇರಿದರು. ಯಾವುದಕ್ಕೂ ನಾನು ಜಗ್ಗದಿದ್ದಾಗ ಕುಮಾರ್ ಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಜೊತೆಗೂಡಿ ನನ್ನನ್ನು ೨೦೧೭ ಜನವರಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದರು ಎಂದು ದೂರಿದ್ದಾರೆ.