ಒಕ್ಕಲಿಗರ ಸಂಘದ ಚುನಾವಣೆ ಕೆಂಚಪ್ಪಗೌಡ ಬಣದಿಂದ ಮತಯಾಚನೆ

ಬೆಂಗಳೂರು, ನ. ೧೭- ಒಕ್ಕಲಿಗರ ಪ್ರಾತಿನಿಧಿಕ ಸಂಸ್ಥೆಗೆ ಡಿಸೆಂಬರ್ ೧೨ ರಂದು ನಡೆಯಲಿರುವ ಚುನಾವಣೆಗೆ ಸಂಘದ ನಮ್ಮ ತಂಡ ಸಜ್ಜಾಗಿದ್ದು, ಸಂಘದ ಗತ ವೈಭವವನ್ನು ಮತ್ತೆ ಮರಳಿ ತರಲು ಕಾರ್ಯೋನ್ಮುಖವಾಗಿದೆ ಎಂದು ಮಾಜಿ ಅಧ್ಯಕ್ಷ ಬಿ. ಕೆಂಚಪ್ಪಗೌಡ ತಿಳಿಸಿದರು.
೨೦೨೧- ೨೬ ರ ಅವಧಿಗೆ ನಡೆಯಲಿರುವ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ. ಕೆಂಚಪ್ಪಗೌಡ, ೨೦೦೮ ೧೩ ರ ಸಾಲಿನಲ್ಲಿ ನಮ್ಮ ತಂಡ ಅಭಿವೃದ್ಧಿ ಪರ್ಷಕ್ಕೆ ಚಾಲನೆ ನೀಡಿತ್ತು. ಈ ಪರಂಪರೆಯನ್ನು ಮುಂದುವರೆಸಲು ನಮ್ಮ ತಂಡವನ್ನು ಬೆಂಬಲಿಸಿ. ಪ್ರಾಮಾಣಿಕ ಸೇವೆ, ಸಂಘದ ಭವಿಷ್ಯ ಮತ್ತು ಸುಧಾರಣೆಗಾಗಿ ಶ್ರಮಿಸಬಲ್ಲ ಉತ್ಸಾಹಿ ತಂಡ ನಮ್ಮದಾಗಿದೆ. ಸಂಘದ ಧ್ಯೇಯೋದ್ಧೇಶಗಳು, ಪ್ರಯೋಜನಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಬದ್ಧತೆಯ ತಂಡ ಚುನಾವಣಾ ಅಖಾಡಕ್ಕೆ ಇಳಿದಿದೆ ಎಂದರು.
ಬಿ.ಕೆಂಚಪ್ಪಗೌಡ ತಂಡದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಅಶೋಕ್ ಹೆಚ್.ಎನ್. ಎಸ್.ಕೃಷ್ಣಪ್ಪ, ಸಿ.ದೇವರಾಜು, ಡಾ.ವಿ.ನಾರಾಯಣಸ್ವಾಮಿ, ನೀಲಕಂಠ ಆರ್.ಗೌಡ, ಆರ್.ಪ್ರಕಾಶ್,ಭಾರತಿ. ವಿ, ಸಿ.ಎಂ.ಮಾರೇಗೌಡ, ಬಿ.ವಿ.ರಾಜಶೇಖರ್ ಗೌಡ, ಡಿ.ಎಂ.ವಿಶ್ವನಾಥ್, ವೆಂಕಟರಾಮೇಗೌಡ, ಎಲ್.ಶ್ರೀನಿವಾಸ್, ಕೆ.ಎಸ್.ಸುರೇಶ್ ಹಾಗೂ ಟಿ.ಎನ್.ಹರೀಶ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಇವರನ್ನು ಬೆಂಬಲಿಸಬೇಕು ಎಂದು ಕೋರಿದರು.
೨೦೧೪ ರಿಂದ ೨೦೧೮ ರ ಅವಧಿಯಲ್ಲಿ ನಿರ್ದೇಶಕರು ಮತ್ತು ಪದಾಧಿಕಾರಿಗಳ ವೈಫಲ್ಯದಿಂದ ಸಂಘದ ವರ್ಚಸ್ಸಿಗೆ ಧಕ್ಕೆಯಾಗಿದೆ. ಮೂರುವರೆ ವರ್ಷಗಳಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಕಠಿಣ ಪರಿಸ್ಥಿತಿ ತಲೆ ದೋರಿದೆ. ಸಂಘವನ್ನು ಸ್ವಂತ ಸ್ವತ್ತು ಮಾಡಿಕೊಂಡು ಬೇಜವಾಬ್ದಾರಿ ವರ್ತನೆ ಖಂಡನೀಯ. ಹಿಂದಿನ ಆಡಳಿತಾವಧಿಯಲ್ಲಿ ಸಂಘಕ್ಕೆ ಬರಬೇಕಿರುವ ಬಾಕಿ ಹಣ ವಸೂಲಿ, ಹಿಂದಿನ ಆಡಳಿತದ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವುದಾಗಿ ಬಿ.ಕೆಂಚಪ್ಪಗೌಡ ಹೇಳಿದರು.