ಒಕ್ಕಲಿಗರ ಮತ ಸೆಳೆಯಲು ಕಸರತ್ತು

ಸಂಜೆವಾಣಿ ನ್ಯೂಸ್
ಮೈಸೂರು : ಏ.16:- ಮೈಸೂರು-ಕೊಡಗು, ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಿ ರುವುದರಿಂದ ಅವರನ್ನು ಪಕ್ಷದತ್ತ ಸೆಳೆಯಲು ಕಸರತ್ತು ನಡೆಯುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಸಮುದಾಯದ ಮುಖಂಡರ ಸಭೆ ನಡೆಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳನ್ನು ಕ್ರೋಡೀಕರಿಸುವ ಕಸರತ್ತಿನ ಭಾಗವಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸಮಾಜದ ಸಭೆಯಲ್ಲಿ ಒಗ್ಗಲಿಗರು ಕಾಂಗ್ರೆಸ್ ಬೆಂಬಲಸುವಂತೆ ಮನವಿ ಮಾಡಿದ ಡಿ.ಕೆ.ಶಿವಕುಮಾರ್, ತಾವು ಸಿಎಂ ಆಗುವ ಸೂಚನೆಯನ್ನೂ ನೀಡಿದರು.
ಸಮುದಾಯವರು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಸ್ವಲ್ಪ ದಿನ ಕಾಯಿರಿ. ದೆಹಲಿಯಲ್ಲಿ ಏನಾಗಬೇಕೋ ಆ ತೀರ್ಮಾನ ಆಗಿದೆ. ಆ ಬಗ್ಗೆ ಚರ್ಚೆ ಬೇಡ. ನೀವು ನನ್ನ ಬೆಂಬಲವಾಗಿ ನಿಂತುಕೊಳ್ಳಿ ಸಾಕು. ಬಿಜೆಪಿಯಲ್ಲಿ ನಮ್ಮವರಿಗೆ ಅವಕಾಶವಿಲ್ಲ. ಜೆಡಿಎಸ್ ಇನ್ಮುಂದೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನನಗೆ ಶಕ್ತಿ ತುಂಬಬೇಕು ಎಂದು ಕೋರಿದರು.
ಮೈಸೂರಿನಲ್ಲಿ ನಮ್ಮ ಸಮಾಜದವರಿಗೆ ರಕ್ಷಣೆ ಇಲ್ಲ, ನಾಯಕತ್ವದ ಪ್ರಶ್ನೆಯೂ ಇದೆ ಎನ್ನುವುದು ನನಗೆ ಗೊತ್ತಿದೆ. ಈಗ ಕೆ.ವೆಂಕಟೇಶ್, ಕೆ.ಹರೀಶ್‍ಗೌಡ ಮುಂದಾಳತ್ವ ವಹಿಸಿ ಕೊಂಡಿದ್ದಾರೆ. ನಾನು ಮೈಸೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ಲಕ್ಷ್ಮಣ್ ಅವರನ್ನು ಸೋಲಿಸಿದರೆ ನನಗೆ ಹಾಗೂ ಒಕ್ಕಲಿಗ ಸಚಿವರಿಗೆ ಬಹಳ ತೊಂದರೆ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಇಲ್ಲಿ 47 ವರ್ಷಗಳ ನಂತರ ಸಮಾಜದ ವ್ಯಕ್ತಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಅಭ್ಯರ್ಥಿ ರೈತ ಕುಟುಂಬದ ಹಿನ್ನೆಲೆಯ ಸಾಮಾನ್ಯ ಕಾರ್ಯಕರ್ತ. ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಹೆಚ್ಚು ಹೇಳಿಕೊಳ್ಳದಿರಬಹುದು. ಆದರೆ, ಸಮಾಜಕ್ಕೆ ಎಲ್ಲೆಲ್ಲಿ ಸಹಾಯ ಮಾಡಬೇಕೋ ಮಾಡಿದ್ದೇನೆ. ಈಗ ಮೈಸೂರು ಕ್ಷೇತ್ರವನ್ನು ಕಳೆದುಕೊಂಡರೆ ಮುಂದೆ ನಮಗೆ ಸಿಗುವುದಿಲ್ಲ ಎನ್ನುವುದನ್ನು ಮರೆಯಬೇಡಿ ಎಂದು ತಿಳಿಸಿದರು.
ದ್ವೇಷವನ್ನೆಲ್ಲ ಮರೆತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ, ಉಳಿಸಿಕೊಳ್ಳಬೇಕಾಗಿದ್ದು ಯಾರ ಜವಾಬ್ದಾರಿ ಆಗಿತ್ತು. ಪರಿಸ್ಥಿತಿ ಸರಿ ಇಲ್ಲ ಅಮೆರಿಕಕ್ಕೆ ಹೋಗಬೇಡಿ ಎಂದು ಹೇಳಿದರೂ ಕುಮಾರಸ್ವಾಮಿ ಕೇಳಲಿಲ್ಲ. ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಬೀಗ ಹಾಕಿಕೊಂಡು ಕುಳಿತುಕೊಂಡರೆ ರಾಜಕಾರಣ ಮಾಡಲು ಸಾಧ್ಯವೆ. ನಾನು ವಿಷ ಹಾಕಿದೆ ಎಂದು ಈಗ ಹೇಳುತ್ತಾರೆ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.
ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಬೇಡಿ ಎಂದು ನಾವೇನಾದರೂ ಹೇಳಿದ್ದೇವೆಯೇ? ನಾವೇನೂ ಅವರನ್ನು ಮುಗಿಸಬೇಕಾಗಿಲ್ಲ. ಜೆಡಿಎಸ್‍ನ ಬಿಜೆಪಿಯವರೇ ಮುಗಿಸುತ್ತಾರೆ ಎಂದು ಹೇಳಿದರು.
ಹಾಸನದಲ್ಲಿ ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಜನರೇ ಮೈತ್ರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕುಮಾರಸ್ವಾಮಿ ನನ್ನ ತಮ್ಮನ ವಿರುದ್ಧವೇ ಸ್ಪರ್ಧಿಸಬೇಕಿತ್ತು. ಅಲ್ಲಿ ಅವರೇ ಶಾಸಕ ಆಗಿದ್ದಾರಲ್ಲವೇ ಪುಟ್ಟರಾಜುಗೆ ಹೇಳಿ ಹೇಳಿ ಕೊನೆಗೆ ಅವರೇ ಸ್ಪರ್ಧಿಸಿದ್ದಾರೆ. ಅಲ್ಲಿ ಕಾರ್ಯಕರ್ತರಿಗೆ ಬೆಳೆಯಲು ಅವಕಾಶವಿಲ್ಲ ಎಂದ ಅವರು, ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದು ಒಕ್ಕಲಿಗರಾದ ನಮಗೇ ಅವಮಾನವಾಗಿದೆ ಎಂದರು.
ಸಭೆಯಲ್ಲಿ ಸಚಿವರಾದ ಕೆ.ವೆಂಕಟೇಶ್ ಹಾಗೂ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಹರೀಶ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‍ಕುಮಾರ್ ಹಾಗೂ ಸಮಾಜದ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಲಿಲ್ಲ : ನಾನು ಬೆಳೆದು ಬಿಡುತ್ತೇನೆ ಎಂಬ ದೃಷ್ಟಿಯಿಂದ ಸೋಲಿಸಲು ಸ್ವತಃ ಕುಮಾ ರಸ್ವಾಮಿಯೇ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಬೇರೆ ಕಡೆ ಅವಕಾಶವಿದ್ದರೂ ಸ್ಪರ್ಧಿಸಲಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ನನ್ನನ್ನು ಮಂತ್ರಿಯನ್ನೇ ಮಾಡಿರಲಿಲ್ಲ. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಬರಲಿಲ್ಲ. ಆಗ, ಹಿಂದಿನದ್ದೆಲ್ಲವನ್ನೂ ಮರೆತು ನಾನೇ ಮುಂದಾಳತ್ವ ವಹಿಸಿಕೊಂಡೆ. ಮುಂದೆ ನಿಮ್ಮನ್ನು ಡಿಸಿಎಂ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.