ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಕೋಲಾರ,ನ.೨೧- ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಹಾಗೂ ಪ್ರಾಧಿಕಾರವನ್ನು ಸ್ಥಾಪಿಸಬೇಕು ಹಾಗೂ ಮೀಸಲಾತಿ ಪ್ರಮಾಣವನ್ನು ಶೇ.೧೬ಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ, ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ರಾಜ್ಯಾಧ್ಯಕ್ಷ ನಾಗಣ್ಣಬಾಣಸವಾಡಿ ಮತನಾಡಿ, ರಾಜ್ಯ ಸರ್ಕಾರವು ಇತರೆ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದೆ. ಇದೇ ರೀತಿ ರಾಜ್ಯದಲ್ಲಿ ಒಕ್ಕಲಿಗ ಜನಾಂಗದವರು ಸಾಕಷ್ಟು ಹಿಂದುಳಿದಿದ್ದು, ಇವರು ಮೂಲತ: ಕೃಷಿ ಹಿನ್ನಲೆಯನ್ನು ಹೊಂದಿರುತ್ತಾರೆ. ಸಮುದಾಯದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಇನ್ನೂ ಸಾಕಷ್ಟು ಹಿಂದುಳಿದಿರುತ್ತಾರೆ.
ವಿಶ್ವಮಾನವ ಕುವೆಂಪು ರವರ ಸಂದೇಶದಂತೆ ಜನಾಂಗವು ಎಲ್ಲರೊಟ್ಟಿಗೆ ಒಂದಾಗಿ ಸ್ನೇಹ ಸಹಬಾಳ್ವೆ ನಡೆಸುತ್ತಾ ಬಂದಿರುತ್ತದೆ. ಹೀಗಿದ್ದರೂ ಸಹ ಜನಾಂಗವು ಇನ್ನೂ ಮುಂಚೂಣಿಗೆ ಬಾರದೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಕ್ಕಲಿಗರ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಿ ಈಗಿರುವ ಮೀಸಲಾತಿ ಪ್ರಮಣವನ್ನು ಶೇ.೧೬ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು.
ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧ್ಯಕ್ಷ ಡಾ.ವೆಂಕಟಾಚಲ, ರಾಜ್ಯ ಹಿರಿಯ ಉಪಾಧ್ಯಕ್ಷ ಹೆಚ್.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿವೃತ್ತ ಡಿವೈಎಸ್‌ಪಿ ಪಿ.ಶಿವಕುಮಾರ್, ಜಿಲ್ಲಾ ಖಜಾಂಚಿ ವೀರವೆಂಕಟಪ್ಪ, ರಾಜ್ಯ ಸಹ ಕಾರ್ಯದರ್ಶಿ ಗೂಳಿಗಾನಹಳ್ಳಿ ನಾಗರಾಜ್, ಸಹ ಕಾರ್ಯದರ್ಶಿ ಲಕ್ಷ್ಮಣ್, ಜಿಲ್ಲಾ ಉಪಾಧ್ಯಕ್ಷ ಎನ್.ಎಸ್ ಪ್ರವೀಣ್‌ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಗೌಡ, ಜಿಲ್ಲಾ ನಿರ್ದೇಶಕ ಎಸ್. ಬೈಚಪ್ಪ, ಜಿಲ್ಲಾ ಖಜಾಂಚಿ ವೀರವೆಂಕಟಪ್ಪ, ಬೆಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ನಂಜೇಗೌಡ, ಎನ್, ಸತೀಶ್, ಪುನೀತ್, ಮುತ್ತು, ಅನಿಲ್, ಪ್ರವೀಣ್ ಪಟೇಲ್, ಮುಖಂಡರು ಇದ್ದರು.