ಒಕ್ಕಲಿಗರಿಗೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹ

ಬೆಂಗಳೂರು, ಮಾ.೨೯-ರಾಜ್ಯದ ಜನಸಂಖ್ಯೆ ಆಧಾರದ ಮೇಲೆ ಒಕ್ಕಲಿಗ ಜನಾಂಗದ ದವರಿಗೆ ಶೇಕಡವಾರು ಪ್ರಮಾಣದಲ್ಲಿ ಶೇ ೪ ರಿಂದ ಶೇ ೧೦ಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯು ಆಗ್ರಹಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರ ನೇತೃತ್ವದಲ್ಲಿ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿಯವರ ನಿಯೋಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಗೆ ಮನವಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಆಗ್ರಹಿಸಿ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಜನಾಂಗದಲ್ಲಿ ಬಹಳಷ್ಟು ಮಂದಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ್ದು ಅವರಿಗೆ ಅನುಕೂಲ ಮಾಡಿಕೊಡಲು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯ ಎಂದು ನಿಯೋಗ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿತು.
ಜನಸಂಖ್ಯೆ ಆಧಾರದ ಮೇಲೆ ಒಕ್ಕಲಿಗರಿಗೆ ಶೇಕಡವಾರು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆನ್ನುವ ಮನವಿಯನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನಿಯೋಗಕ್ಕೆ ಜಯಪ್ರಕಾಶ್ ಹೆಗಡೆ ಅವರು ನೀಡಿದ್ದಾರೆ ಎಂದು ಆಡಿಟರ್ ನಾಗರಾಜ್ ತಿಳಿಸಿದ್ದಾರೆ.
ನಿಯೋಗದಲ್ಲಿ ಕವಿ ಎಲ್.ಎನ್. ಮುಕುಂದರಾಜ್, ಯುವ ನಾಯಕರಾದ ಮಹೇಶಗೌಡ ಮತ್ತು ಕರುಣ್ ಆನಂದ್ ಅವರಿದ್ದರು.