ಒಕ್ಕಲಿಗರಿಗೆ ಬಿಜೆಪಿ ಅನ್ಯಾಯ: ಸಿ.ಟಿ.ರವಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.10:- ರಾಜ್ಯ ಬಿಜೆಪಿಯ ಹಲವು ಒಕ್ಕಲಿಗರಿಗೆ ಟಿಕೇಟ್ ತಪ್ಪಿದ್ದೇಕೆ? ಸಮುದಾಯದವರಿಗೆ ಟಿಕೇಟ್ ಹಂಚಿಕೆಯಲ್ಲಿ ಆದ ಅನ್ಯಾಯದ ಕುರಿತ ಮಾದ್ಯಮದ ಪ್ರಶ್ನೆಗೆ ಮಾಜಿ ಸಚಿವ ಸಿ.ಟಿ.ರವಿ ಉತ್ತರಿಸದೇ ಮೌನದಲ್ಲೇ ಹೊರನಡೆದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಒಕ್ಕಲಿಗ ಸಂಸದರಿಗೆ ಟಿಕೇಟ್ ನೀಡದಿರುವುದೇಕೆ?, ರಾಜ್ಯದಲ್ಲಿ ಹಲವು ಒಕ್ಕಲಿಗ ನಾಯಕರಿಗೆ ಟಿಕೇಟ್ ತಪ್ಪಿದೆ. ಹೀಗಿರುವಾಗ ಬಿಜೆಪಿಗೆ ಒಕ್ಕಲಿಗರು ಯಾಕೆ ಮತ ಹಾಕಬೇಕೆಂಬ ಪ್ರಶ್ನೆಗೆ ಈ ಬಾರಿ ರಾಷ್ಟ್ರವಾದವನ್ನು ಬೆಂಬಲಿಸಿ ಮತ ಹಾಕುತ್ತಾರೆಂದರು.
ಒಂದೊಂದು ಚುನಾವಣೆ ವೇಳೆ ಒಂದೊಂದು ಆಧಾರದ ಮೇಲೆ ನಡೆಯುತ್ತದೆ. ಈಗ ಒಕ್ಕಲಿಗರಿಗೆ ಟಿಕೇಟ್ ಅನ್ಯಾಯ ವಿಚಾರ ಅಪ್ರಸ್ತುತ. ಈ ಬಾರಿ ಒಕ್ಕಲಿಗರು ರಾಷ್ಟ್ರವಾದ ಬೆಂಬಲಿಸಿ ಮತ ಹಾಕಲಿದ್ದಾರೆಂದು ಹೇಳುತ್ತಾ ಹೊರ ನಡೆದರು.
ಅಬಿವೃದ್ಧಿ ಚರ್ಚೆಗೂ ರೆಡಿ:
ದೇಶದ ಇಷ್ಟು ವರ್ಷಗಳ ಇತಿಹಾಸದಲ್ಲಿ ರಾಜ್ಯಕ್ಕೆ ಮೋದಿ ಸರ್ಕಾರ ನೀಡಿದಷ್ಟು ಅನುದಾನವನ್ನು ಯಾವ ಸರ್ಕಾರವೂ ನೀಡಿಲ್ಲ. ಈ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದು, ಸಿದ್ದರಾಮಯ್ಯ ಸಿದ್ಧರಿದ್ದಾರೆಯೇ ಎಂದು ಮಾಜಿ ಸಚಿವ ಸಿ.ಟಿ.ರವಿ ಸವಾಲು ಹಾಕಿದರು.
ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಷ್ಟು, ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ನೀಡಿದ ತೆರಿಗೆ ಪಾಲು, ಗ್ರ್ಯಾಂಟ್ ಮೂಲಕ ಎಷ್ಟು ಅನುದಾನ ನೀಡಿದೆ ಎಂಬುದರ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಮೋದಿ ಇತರ ಪ್ರಧಾನಿಗಳಿಗಿಂತ ಹೆಚ್ಚಿನ ಅನುದಾನವನ್ನೇ ನೀಡಿದ್ದಾರೆ. ಈ ಕುರಿತು ದಾಖಲೆಗಳನ್ನೂ ಮುಂದಿಟ್ಟಿದ್ದೇವೆ. ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಗ್ರ್ಯಾಂಟ್ ಕೊಟ್ಟವರು, ತೆರಿಗೆ ಪಾಲು ನೀಡಿದವರು ಅನ್ಯಾಯ ಮಾಡಿದ್ದಾರೆ ಎಂಬುದಾದರೆ ಮೊದಲು ನಿಮ್ಮ ದೃಷ್ಟಿ ದೋಷ ಸರಿಪಡಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ, ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಸೀತಾರಾಮನ್ ಅವರೇ ಉತ್ತರ ಕೊಟ್ಟಿದ್ದಾರೆ. ಆದರೆ, ಅವರು ಚರ್ಚೆ ಮಾಡದೆ ಏಕಪಾತ್ರಾಭಿನಯ ಮಾಡಿದರು. ನಾವು ಅನುದಾನ ಕೊಟ್ಟಿದ್ದು ಸುಳ್ಳಾದರೆ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದೆ, ಯಾರೂ ಸ್ವೀಕರಿಸಲಿಲ್ಲ. ಸಂಸತ್ತಿನಲ್ಲೇ ಸ್ಪಷ್ಟನೆ ನೀಡಿದರೂ ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೇರಳ ಹಾದಿಯಲ್ಲಿ ಸಾಗುತ್ತಿದ್ದು, ಅವರಂತೆ ದಿವಾಳಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.
ಎನ್ಡಿಆರ್ ಎಫ್, ಎಸ್ಡಿಆರ್ ಎಫ್ ಅಡಿಯಲ್ಲಿ ರಾಜ್ಯಕ್ಕೆ 800 ಕೋಟಿ ಮುಂಗಡ ಅನುದಾನ ನೀಡಲಾಗಿದೆ. ನೀತಿ ಸಂಹಿತೆ ಇರುವುದರಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ಇಷ್ಟು ದಿನ ರಾಜ್ಯ ಸರ್ಕಾರ ಬಿಡುಗಡೆ ಮಾಡಿ ನಂತರ ಹೊಂದಾಣಿಕೆ ಮಾಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಆ ರೀತಿ ಮಾಡಿಲ್ಲ. ಬೆಲೆ ಏರಿಕೆಯಿಂದ ಬಡ್ಡಿರಹಿತವಾಗಿ 8 ಸಾವಿರ ಕೋಟಿ ಸಾಲ ನೀಡಿದರೂ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ದೇಶ ವಿಭಜನೆಯ ರೋಗ ಆವರಿಸಿದೆ:
ಕಾಂಗ್ರೆಸ್ ಪ್ರನಾಳಿಕೆಯಲ್ಲಿ ದೇಶ ವಿಭಜನೆಯ ರೋಗ ಆವರಿಸಿಕೊಂಡಿದೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು, ಮುಸ್ಲಿಂ ಲೀಗ್, ಕಾಂಗ್ರೆಸ್ ಸಹಿ ಹಾಕಿ ಭಾರತ ವಿಭಜಿಸಿದರು. ಆ ವಿಭಜಿಸುವ ರೋಗ ಇಂದಿಗೂ ಕಾಂಗ್ರೆಸ್ ಗೆ ಕಡಿಮೆಯಾಗಿಲ್ಲ. ಜಾತಿ, ಪ್ರಾದೇಶಿಕತೆ ಹೆಸರಿನಲ್ಲಿ, ಮತೀಯವಾದಕ್ಕೆ ಕುಮ್ಮಕ್ಕು ಕೊಡುವ ನೀತಿಯ ಮೂಲಕ ಸಮಾಜ ವಿಭಜಿಸುತ್ತಿದ್ದಾರೆ. ಜತೆಗೆ ಪ್ರನಾಳಿಕೆ ಸಿದ್ಧಪಡಿಸಲು ನಗರ ನಕ್ಸಲರ ಸಹಾಯ, ತಾಲೀಬಾನಿಗಳ ಅಜೆಂಡಾದ ಪ್ರೇರಣೆ ಪಡೆದುಕೊಂಡಿದ್ದಾರೆ. ಸಮಾಧಾನದ ಸಂಗತಿ ಎಂದರೆ ಯಾವ ಸಮೀಕ್ಷೆಯೂ ಕಾಂಗ್ರೆಸ್ ಎರಡಂಕಿ ದಾಟುವ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದರು.
ಕಾಂಗ್ರೆಸ್ ಸ್ಥಾಪನೆ ಉದ್ದೇಶ ಸ್ವಾತಂತ್ರ್ಯವಲ್ಲ: ಕಾಂಗ್ರೆಸ್ ಸ್ಥಾಪನೆ ಉದ್ದೇಶ ಸ್ವಾತಂತ್ರ್ಯವಲ್ಲ.
ಕಾಂಗ್ರೆಸ್ ಸ್ಥಾಪನೆಯಿಂದ ಇಲ್ಲಿಯವರೆಗೆ ಕಾಲಕಾಲಕ್ಕೆ ನೀತಿ ಬದಲಿಸಿಕೊಂಡು ಬಂದಿದೆ. ಸ್ಥಾಪನೆಯಾದ ಎರಡು ವರ್ಷ ಕೇವಲ ಅರ್ಜಿ ಕೊಡುವ ಸಂಘಟನೆಯಾಗಿತ್ತು. ನಂತರ ಸುಭಾಷ್ ಚಂದ್ರಬೋಶ್, ಗಾಂಧೀಜೀ ಸೇರಿದಂತೆ ಹಲವರು ಆಂದೋಲನದ ರೂಪ ನೀಡಿದರು.
ನಂತರ ನೆಹರು ತನ್ನ ಕುಟುಂಬಕ್ಕೆ ಅಧಿಕಾರ ಸಿಗುವಂತೆ ತಳಪಾಯ ಮಾಡಿಕೊಂಡರು. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಒಂದು ಕುಟುಂಬದ ಕಪಿಮುಷ್ಠಿಯಿಂದ ಹೊರಬಂದಿಲ್ಲ. ಕಟುಂಬದಿಂದ ದೂರ ಮಾಡಲು ಪ್ರಯತ್ನಿಸಿದ ನರಸಿಂಹರಾವ್ ಅವರನ್ನೂ ವಂದಿಮಾಗದರು ಬದಿಗೆ ಸರಿಸಿ ಕುಟುಂಬಕ್ಕೆ ಸೀಮಿತವಾಗುವಂತೆ ಮಾಡಿದರು ಎಂದರು.
ರಾಹುಲ್ ಗಾಂಧಿಗೆ ಕಡ್ಡಾಯ ನಿವೃತ್ತಿ:
ದೇಶದಲ್ಲಿ ಕಾಂಗ್ರೆಸ್ ಗೆ ಉತ್ತಮ ನಾಯಕರೇ ಇಲ್ಲ. ತನ್ನ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿಯೆ ಚುನಾವಣೆ ನಂತರ ದೇಶದ ಜನರೇ ಕಡ್ಡಾಯ ನಿವೃತ್ತಿ ನೀಡುತ್ತಾರೆ ಎಂದರು.
ಯಾರ ನೇತೃತ್ವ ಬೇಕು ಚರ್ಚೆ ಮಾಡಿ:
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚರ್ಚೆಯಾಗಬೇಕಿರುವುದು ಜಾತಿಯಲ್ಲ, ನೀತಿ. ರಾಷ್ಟ್ರೀಯ ವಿಚಾರಗಳು, ಭದ್ರತೆ, ಸುರಕ್ಷತೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಭವಿಷ್ಯದ ಗುರಿ ಚರ್ಚೆ ಆಗಬೇಕು. ರಾಷ್ಟ್ರಕ್ಕೆ ಯಾರ ನೇತೃತ್ವ ಬೇಕು, ಯಾವ ಸರ್ಕಾರ ಬೇಕು, ಪ್ರಾಮಾಣಿಕತೆ, ಸಾಮಥ್ರ್ಯ, ಕೊಡುಗೆಗಳು, ಹಗರಣಗಳು, ಅದ್ವಾನಗಳು ಚರ್ಚೆ ಆಗಬೇಕು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳಿಗೆ ಯಾರು ಕಾರಣೀಭೂತರು? ಎಂಬುದನ್ನೆಲ್ಲಾ ಚರ್ಚೆ ಮಾಡಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮೋಹನ್, ಬಿಜೆಪಿ ಮಾದ್ಯಮ ವಕ್ತಾರ ಮಹೇಶ್ ರಾಜೇ ಅರಸ್, ಸೇರಿ ಹಲವರು ಇದ್ದರು.