ಒಆರೆಸ್ ಮತ್ತು ನಿರ್ಜಲೀಕರಣದ ನಿಯಂತ್ರಣ

ಕಲಬುರಗಿ:ಜು.೨೭:ಸಾಮಾನ್ಯವಾಗಿ ಮಕ್ಕಳನ್ನು ಕಾಡುವ ಅತಿಸಾರ ಭೇದಿ ಸಂದರ್ಭದಲ್ಲಿ ಒಆರೆಸ್ (ಔಡಿಚಿಟ ಖehಥಿಜಡಿಚಿಣioಟಿ Sಚಿಟಣs) ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅತಿಸಾರ ಅಥವಾ ಆಮಶಂಕೆ ಭೇದಿಯಿಂದಾಗಿ ಮಕ್ಕಳ ದೇಹದಲ್ಲಿ ಸಕ್ಕರೆ ಮತ್ತು ಉಪ್ಪಿನ ಅಂಶದಲ್ಲಿ ಗಣನೀಯ ಇಳಿಕೆ ಕಂಡುಬರುವುದರಿಂದ ಮಕ್ಕಳನ್ನು ಅತಿಯಾದ ಸುಸ್ತು ಕಾಡುತ್ತದೆ. ಕೆಲವು ಮಕ್ಕಳಲ್ಲಿ ಇದು ರಕ್ತದೊತ್ತಡದ ಏರುಪೇರಿಗೂ ಕಾರಣವಾಗುತ್ತದೆ. ಕೆಲವೊಮ್ಮೆ ಮಗುವಿನ ಜೀವಕ್ಕೂ ಅಪಾಯ ತಗಲುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಮಕ್ಕಳನ್ನು ಸಕಾಲದಲ್ಲಿ ಕಾಪಾಡುವುದು ಹೇಗೆ? ಎಂಬುದನ್ನು ಮನವರಿಕೆ ಮಾಡಿಕೊಡಲು ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ಒಆರೆಸ್ ಸಪ್ತಾಹ ಆಚರಣೆಗೆ (ಜು.೨೫ರಿಂದ ೩೧) ‘ನಿರ್ಜಲೀಕರಣ ಸಮಸ್ಯೆಗೆ ಅಮೃತ’ ಎನ್ನುವ ಘೋಷವಾಕ್ಯವನ್ನು ನೀಡಿದೆ. ಆ ಮೂಲಕ ವಿಶೇಷವಾಗಿ, ಮನೆಗಳಲ್ಲಿ ಒಆರೆಸ್ ಸಿದ್ದಪಡಿಸುವುದು ಹೇಗೆ? ಅತಿಸಾರ ಭೇದಿಯಿಂದ ಬಳಲುತ್ತಿರುವ ಮಕ್ಕಳಿಗೆ ಮೇಲಿಂದ ಮೇಲೆ ಒಆರೆಸ್ ಹೇಗೆ ಕುಡಿಸಬೇಕು ಎಂಬುದರ ಕುರಿತು ಭಾರತೀಯ ಮಕ್ಕಳ ವೈದ್ಯರ ಸಂಘ (ಐಎಪಿ) ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈಗಾಗಲೇ ಜುಲೈ ೨೫ರಿಂದ ಐಎಪಿ ವತಿಯಿಂದ ಕಲಬುರಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ನಿರ್ಜಲೀಕರಣ ಸಮಸ್ಯೆಗೆ ಒಆರೆಸ್ ಮೂಲಕ ಪರಿಹಾರ ಕಂಡುಕೊಳ್ಳುವ ಬಗೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಜು.೩೧ರವರೆಗೆ ಈ ಸಪ್ತಾಹ ಕೈಗೊಳ್ಳುತ್ತಿದ್ದಾಗ್ಯೂ, ಜು.೨೯ರಂದು ಒಆರೆಸ್ ದಿನ ಆಚರಿಸಲಾಗುತ್ತಿದೆ.

ಒಆರೆಸ್ ಎಂದರೆ ಏನು?

ಅತಿಸಾರ ಭೇದಿಯಿಂದ ಬಳಲುತ್ತಿರುವ ಮಕ್ಕಳ ದೇಹದಲ್ಲಿ ಸಕ್ಕರೆ ಮತ್ತು ಉಪ್ಪಿನ ಅಂಶದ ಕೊರತೆ ಪ್ರಮುಖವಾಗಿ ಕಾಡತೊಡಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ನೀರಿಗೆ ಉಪ್ಪು ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಬೆರೆಸುವ ಮೂಲಕ ಸಿದ್ದಪಡಿಸುವ ಒಆರೆಸ್ ದ್ರಾವಣ (ಎಲೆಕ್ಟ್ರೋಲೈಟ್ಸ್) ಕುಡಿಸುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸಬಹುದು. ಅತಿಸಾರ ಭೇದಿಯಿಂದಾಗಿ ಸುಸ್ತಾಗಿರುವ ಮಕ್ಕಳ ಪೈಕಿ ಕೆಲವರಿಗೆ ಮೇಲಿಂದ ಮೇಲೆ ವಾಂತಿ ಆಗುತ್ತಿರುತ್ತದೆ. ಇದರಿಂದಾಗಿ ಮಕ್ಕಳಲ್ಲಿ ನಿಶ್ಯಕ್ತಿ ಕಂಡುಬರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಆರೆಸ್ ಪ್ರಧಾನ ಪಾತ್ರ ವಹಿಸುತ್ತದೆ. ಒಂದುವೇಳೆ, ಒಆರೆಸ್ ಪೌಡರ್ ಪಾಕೆಟ್ ಹೊರಗಿನಿಂದ ತಕ್ಷಣಕ್ಕೆ ಖರೀದಿಸಿ ತರುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಮನೆಯಲ್ಲಿಯೇ ಈ ಜೀವದ್ರವ್ಯ ಸಿದ್ದಪಡಿಸಿಕೊಳ್ಳಬಹುದಾಗಿದೆ.

ಒಆರೆಸ್ ಪುಡಿ ಬೆರಕೆ ಹೇಗೆ?

ಒಆರೆಸ್ ಪುಡಿಯನ್ನು ಒಂದು ಸ್ವಚ್ಛವಾದ ಪಾತ್ರೆಯಲ್ಲಿ ಹಾಕಿಕೊಳ್ಳಬೇಕು. ಬಳಿಕ ಆ ಪಾತ್ರೆಗೆ ಸಾಕಷ್ಟು ಪ್ರಮಾಣದ ಸ್ವಚ್ಛ ಕುಡಿಯುವ ನೀರು ಸುರಿಯಬೇಕು. ಸ್ವಚ್ಛವಾದ ಚಮಚದೊಂದಿಗೆ ಒಆರೆಸ್ ಪುಡಿ ನೀರಿನಲ್ಲಿ ಕರಗಿಸುವ ಪ್ರಯತ್ನ ಮಾಡಬೇಕು. ಒಆರೆಸ್ ಪುಡಿಗೆ ನೀರು ಮಿಶ್ರಣ ಮಾಡುವಾಗ ನೀರಿನ ಪ್ರಮಾಣ ಕಡಿಮೆ ಇರದಂತೆ ಎಚ್ಚರ ವಹಿಸಬೇಕು. ಒಮ್ಮೆ ಒಆರೆಸ್ ಪುಡಿಯನ್ನು ನೀರಿನಲ್ಲಿ ಸುರಿದ ಬಳಿಕ ಹೆಚ್ಚುವರಿಯಾಗಿ ಸಕ್ಕರೆ ಅಥವಾ ಉಪ್ಪನ್ನು ಬೆರೆಸಬಾರದು. ಮೇಲಾಗಿ, ಹಾಲು, ಜ್ಯೂಸ್ ಅಥವಾ ಪೇಯಗಳೊಂದಿಗೆ ಒಆರೆಸ್ ಪುಡಿ ಬೆರೆಸಿ ಕುಡಿಸುವ ಯತ್ನವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಆರೆಸ್ ಪುಡಿ ಏನಿದ್ದರೂ ನೀರಿನೊಂದಿಗೆ ಮಾತ್ರ ಮಿಶ್ರಣ ಮಾಡಿ ಕುಡಿಸಬೇಕು. ಇದರಿಂದ ಮಕ್ಕಳಲ್ಲಿ ತಕ್ಷಣ ಚೈತನ್ಯ ಮರುಕಳಿಸುತ್ತದೆ.

ಎಷ್ಟು ಪ್ರಮಾಣದಲ್ಲಿ ಒಆರೆಸ್ ಕುಡಿಸಬೇಕು?

ಅತಿಸಾರ ಭೇದಿಯ ಮುಖ್ಯ ಲಕ್ಷಣವೆಂದರೆ, ಮಕ್ಕಳು ಪ್ರತಿಬಾರಿ ಭೇದಿ ಮಾಡಿಕೊಂಡಾಗಲೂ ಹೆಚ್ಚಿನ ಪ್ರಮಾಣದ ನೀರು ದೇಹದಿಂದ ಹೊರಹೋಗುತ್ತದೆ. ಹೀಗಾಗಿ, ಮಕ್ಕಳು ದೈಹಿಕವಾಗಿ ಚೈತನ್ಯ ಕಳೆದುಕೊಳ್ಳುತ್ತಾರೆ. ಹೀಗಾಗುವಾಗ ತಕ್ಷಣ ಮೇಲಿಂದ ಮೇಲೆ ಒಆರೆಸ್ ದ್ರಾವಣ ಕುಡಿಸಬೇಕು. ಅದರಲ್ಲೂ ಎರಡು ವರ್ಷದೊಳಗಿನ ಮಕ್ಕಳಿಗೆ ಪ್ರತಿಬಾರಿ ಭೇದಿ ಆದಾಗಲೂ ಈ ದ್ರಾವಣವನ್ನು ತಪ್ಪದೆ ಕುಡಿಸಬೇಕು. ಮಕ್ಕಳು ಲೋಟದಲ್ಲಿ ದ್ರಾವಣ ಕುಡಿಯಲು ನಿರಾಕರಿಸಿದಲ್ಲಿ ಪ್ರತಿ ಎರಡು ಮೂರು ನಿಮಿಷಕ್ಕೊಮ್ಮೆ ಒಂದು ಚಮಚದಷ್ಟು ಒಆರೆಸ್ ದ್ರಾವಣವನ್ನು ಕುಡಿಸುತ್ತಿರಬೇಕು.

ಮನೆಯಲ್ಲಿ ಒಆರೆಸ್ ದ್ರಾವಣ ತಯಾರಿಕೆ ಹೇಗೆ?

ಒಂದು ಲೀಟರ್ ಸ್ವಚ್ಛವಾದ ಕುಡಿಯುವ ನೀರಿಗೆ ಐದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪನ್ನು ಬೆರೆಸಬೇಕು. ಇದಾದ ಬಳಿಕ ಸಕ್ಕರೆ ಮತ್ತು ಉಪ್ಪು ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಅಂಶದ ಕುರಿತು ಮಾತ್ರ ಎಚ್ಚರ ವಹಿಸಬೇಕಾಗುತ್ತದೆ. ಏನೆಂದರೆ, ಅತಿಯಾದ ಸಕ್ಕರೆ ಮತ್ತು ಪ್ರಮಾಣ ಮೀರಿದ ಉಪ್ಪಿನಿಂದಾಗಿ ಲಾಭಕ್ಕಿಂತಲೂ ಅಪಾಯವೇ ಹೆಚ್ಚು. ಹೀಗಾಗಿ, ಒಆರೆಸ್ ದ್ರಾವಣ ಸಿದ್ದಪಡಿಸುವಾಗ ನಿಗದಿತ ಪ್ರಮಾಣದಲ್ಲಿಯೇ ಸಕ್ಕರೆ ಮತ್ತು ಉಪ್ಪು ಬಳಸುವುದನ್ನು ಮರೆಯಬಾರದು. ಹೀಗೆ ಸಿದ್ದಪಡಿಸಿದ ದ್ರಾವಣವನ್ನು ೨೪ ತಾಸಿಗಿಂತಲೂ ಹೆಚ್ಚು ಹೊತ್ತು ಸಂರಕ್ಷಿಸಿಡುವ ಯತ್ನ ಮಾಡಬಾರದು. ದ್ರಾವಣದಲ್ಲಿ ಕೆಲವು ಅಪಾಯಕಾರಿ ಬ್ಯಾಕ್ಟೀರಿಯಾಗಳು ಜೀವ ಪಡೆಯುವುದರಿಂದ ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊತೆಗೆ, ಅಶುದ್ಧವಾದ ನೀರಿನಲ್ಲಿ ಒಆರೆಸ್ ದ್ರಾವಣ ಸಿದ್ಡಪಡಿಸುವ ಗೋಜಿಗೆ ಹೋಗಬಾರದು. ಒಂದುವೇಳೆ, ಸ್ವಚ್ಛವಾದ ನೀರಿನ ಲಭ್ಯತೆ ಸಾಧ್ಯವಿಲ್ಲದಿದ್ದಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಆರಿಸಿ, ಸೋಸಿದ ಬಳಿಕ ಆ ನೀರಿನಲ್ಲಿ ದ್ರಾವಣ ಸಿದ್ದಪಡಿಸಬಹುದು.