ಒಂದೊಂದು ಹನಿ ಜೀವಜಲ ಅತ್ಯಮೂಲ್ಯ

ಕೋಲಾರ ಮಾ.೨೩: ನಾವು ಪೋಲು ಮಾಡುವ ಒಂದೊಂದು ಹನಿ ನೀರಿನಿಂದ ಒಂದು ಜೀವ ಉಳಿಯಬಹುದು, ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿ ಜೀವಜಲವೂ ಅತ್ಯಮೂಲ್ಯ ಎಂದು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನೇತಾಜಿ ಇಕೋ ಕ್ಲಬ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಹನಿ ನೀರಾವರಿ ಪದ್ಧತಿಯಿಂದ ನೀರನ್ನು ಉಳಿಸುವ ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು .ನೀರಿನ ಮಿತಬಳಕೆ ಮಾಡುವ ಸಂಕಲ್ಪ ಇಂದೇ ಮಾಡೋಣ. ಸಾಧ್ಯವಾದಷ್ಟು ನೀರನ್ನು ಮಿತವಾಗಿ ಬಳಸೋಣ.
ಒಂದೊಂದು ಜೀವವನ್ನೂ ಉಳಿಸೋಣ. ಜೀವ ಜಲ ನೀರನ್ನು ಸಂರಕ್ಷಿಸೋಣ ಎಂದರು. ವಿದ್ಯಾರ್ಥಿಗಳು ತಮ್ಮ ಬಾಲ್ಯದಿಂದಲೇ ನೀರಿನ ಮಹತ್ವ ಮತ್ತು ಅದರ ಪರಿಣಾಮಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಹೊಂದಬೇಕು ಆಗ ಮಾತ್ರ ನೀರಿನ ಮಹತ್ವ ಅರಿವಾಗುವುದು ಎಂದು ತಿಳಿಸಿದರು .ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾದ್ಯಾಯ ಜಿ
.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ನೀರಿನ ಮಹತ್ವದ ಬಗ್ಗೆ ವಿಚಾರಗೋಷ್ಠಿಗಳು ಚರ್ಚೆ ಮುಖಾಂತರ ಜ್ಞಾನ ದಾಸೋಹಿಗಳಾಗಬೇಕು ನೀರಿನ ಸಮಗ್ರ ಮಹತ್ವ ಅರಿಯಬೇಕಾದರೆ
ಆಗಿಂದಾಗ್ಗೆ ಚರ್ಚೆ, ಪ್ರಬಂಧ ಗಳಲ್ಲಿ ಮತ್ತು ಸಂವಹನದ ಮೂಲಕ ಜ್ಞಾನದ ಅಭಿವೃದ್ಧಿ ಪಡಿಸಿಕೊಳ್ಳಬೇಕೆಂದರು.ನೀರಿನ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆಯನ್ನು ಸಹಶಿಕ್ಷಕರುಗಳಾದ ಮುನಿಯಪ್ಪ, ಗೋವಿಂದಪ್ಪ, ಕೃಷ್ಣಪ್ಪ, ಸೊಣ್ಣೇಗೌಡ, ಮಮತಾ, ಮೀನಾ ನಡೆಸಿಕೊಟ್ಟರು