ಒಂದೇ ಹೋಟೆಲ್ ನ 19 ಮಂದಿಗೆ ಕೋವಿಡ್..!

ಬೆಂಗಳೂರು, ಏ.13- ಜೆಪಿ ನಗರದ ಹೋಟೆಲ್‌ವೊಂದರಲ್ಲಿ ಬರೊಬ್ಬರಿ 19 ಮಂದಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಜೆಪಿ ನಗರದ ಚೌಕಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ 55 ಮಂದಿಯ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 19 ಜನ ಸಿಬ್ಬಂದಿಗೆ ಕೋವಿಡ್​ ತಗುಲಿರುವುದು ಸ್ಪಷ್ಟವಾಗಿದೆ.

ಇದರ ಬೆನ್ನಲ್ಲೇ, ಹೋಟೆಲ್‌ಗೆ ಭೇಟಿ ‌‌ನೀಡಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಸೋಂಕಿತರನ್ನು ಹೋಮ್ ಐಸೋಲೇಟ್ ಮಾಡಿದ್ದಾರೆ. ರೋಗ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.

ಈಗಾಗಲೇ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.