ಒಂದೇ ಭಾವಚಿತ್ರದ ಮೂರು ವಿಭಿನ್ನ ಹೆಸರಿಗೆ ೯ ಇ-ಖಾತೆ ವಿತರಣೆ

ಸರ್ವೇ ನಂ.೩೩೯ ಸರ್ಕಾರಿ ಜಮೀನು ನಿವೇಶನಕ್ಕೆ ಖಾಸಗಿ ಸರ್ವೇ ನಂಬರ್ ದಾಖಲು
ರಾಯಚೂರು.ಜ.೦೨- ನಗರಸಭೆ ಇ-ಖಾತೆ ಹಂಚಿಕೆಯ ಅವ್ಯವಹಾರ ಕರ್ಮಕಾಂಡ ಆಡಳಿತಾಧಿಕಾರಿ ಅವಧಿಯಿಂದ ಇಲ್ಲಿವರೆಗೂ ಮುಂದುವರೆದು ಸರ್ಕಾರಿ ಜಾಗಕ್ಕೆ ಇ-ಖಾತೆ ವಿತರಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮುಂದೆ ಮನವಿ ಮಂಡಿಸಲಾಗಿದೆ.
ದಲಿತ ಮತ್ತು ಅಲ್ಪಸಂಖ್ಯಾತ ಸೇವಾ ಸಮಿತಿ ನಿನ್ನೆ ನೀಡಿದ ದೂರಿನಲ್ಲಿ ನಗರಸಭೆಯ ಇ-ಖಾತೆ ಹಂಚಿಕೆ ವಿಭಾಗದ ತುಘಲಕ್ ದರ್ಬಾರ್‌ನ್ನು ಮತ್ತೊಮ್ಮೆ ಬಹಿರಂಗ ಪಡಿಸಿದೆ. ಪೌರಾಯುಕ್ತರು ಮತ್ತು ಕಂದಾಯ ಅಧಿಕಾರಿಗಳು ವೈಯಕ್ತಿಕ ಲಾಭಕ್ಕೆ ಈಗಾಗಲೇ ಜಿಲ್ಲಾಡಳಿತದಿಂದ ಕಟ್ಟಡ ತೆರವಿಗೆ ಕಾರ್ಯಾಚರಣೆ ನಡೆಸಿದ ಸರ್ಕಾರಿ ಜಮೀನಿಗೆ ಇ-ಖಾತೆ ವಿತರಿಸಿದ್ದಾರೆಂದು ಅಧ್ಯಕ್ಷ ಸೈಯದ್ ಖೈಸರ್ ಹುಸೇನಿ ಅವರು ಜಿಲ್ಲಾಧಿಕಾರಿಗಳ ಮುಂದೆ ಪರಿಶೀಲನೆಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ ಯೋಜನಾ ನಿರ್ದೇಶಕರ ಮೂಲಕ ಈ ಮನವಿ ಸಲ್ಲಿಸಲಾಗಿದೆ. ಸಮಿತಿಯ ದೂರಿನನ್ವಯ ವಾರ್ಡ್ ೨೮ ಎಲ್‌ಬಿಎಸ್ ನಗರದಲ್ಲಿ ಬರುವ ಸರ್ವೇ ನಂ.೩೩೯ ನಿವೇಶನಗಳಿಗೆ ಸರ್ವೇ ನಂ.೩೪೧ ಎಂದು ಅನಧಿಕೃತವಾಗಿ ಇ-ಖಾತೆ ವಿತರಿಸಿದ ಪೌರಾಯುಕ್ತ ಮತ್ತು ನಗರಸಭೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಲ್ಲದೇ, ಅಮಾನತುಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ದೂರಿಗೆ ಒಟ್ಟು ೯ ಇ-ಖಾತೆ ಪತ್ರದ ನಕಲು ಲಗತ್ತಿಸಲಾಗಿದೆ.
ಇ-ಖಾತೆ ವಿತರಿಸಿದ ಸಂಬಂಧಫಟ್ಟ ಇಲಾಖೆ ಮತ್ತು ಅಧಿಕಾರಿಗಳು ಒಂದೇ ಭಾವಚಿತ್ರದ ಮೂವರು ಹೆಸರುಗಳ ವ್ಯಕ್ತಿಗೆ ಇ-ಖಾತೆ ವಿತರಿಸಿರುವುದು ಸ್ಪಷ್ಟಗೊಳ್ಳುತ್ತದೆ. ಆಧಾರ್ ಕಾರ್ಡ್ ದಾಖಲೆಗಳನ್ನಾಧರಿಸಿ, ಹೆಸರು ನೋಂದಾಯಿಸಿ ಇ-ಖಾತೆ ವಿತರಿಸುವ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಗೆ ಮೂರು ಭಿನ್ನ ಹೆಸರಿನಡಿ ಇ-ಖಾತೆ ವಿತರಿಸುವ ಔಚಿತ್ಯ ಇ-ಖಾತೆ ಭ್ರಷ್ಟಾಚಾರವನ್ನು ಮತ್ತೊಮ್ಮೆ ಬಯಲಿಗಿಟ್ಟಿದೆ. ರವೀಂದ್ರನಾಥ ಟಾಗೋರ್ ಕಾಲೋನಿ ಚಂದ್ರಬಂಡಾ ರೋಡ್ ವಿಳಾಸದಲ್ಲಿ ಆಸ್ತಿ ಮಾಲೀಕರು ವಾಸಿಸುತ್ತಾರೆಂಬುವುದು ಎಲ್ಲಾ ೯ ಇ-ಖಾತೆಗಳಲ್ಲಿ ವಿಳಾಸ ದಾಖಲಿಸಲಾಗಿದೆ.
ಆದರೆ, ಒಂದೇ ವಿಳಾಸ, ಒಂದೇ ಭಾವಚಿತ್ರ ಹಾಗೂ ಒಂದೇ ಆಧಾರ್ ನಂಬರ್ ಹೊಂದಿದ ಮೂರು ಹೆಸರುಗಳಿಗೆ ಇ-ಖಾತೆ ವಿತರಿಸುವುದು ಭಾರೀ ಅನುಮಾನಗಳಿಗೆ ದಾರಿ ಮಾಡಿದೆ. ಸ್ವತ್ತಿನ ಸಂಖ್ಯೆ ೨೮-೨-೫೮೭-೬೯೪ ಕ್ಕೆ ಸಂಬಂಧಿಸಿದ ಇ-ಖಾತೆಯಲ್ಲಿ ಶೇಕ್ ಮೌಲಾನ ಬಿನ್ ಮಹಾಬೂಬ್ ಅಲಿ ಇವರ ಹೆಸರಿಗೆ ಒಂದು ಇ-ಖಾತೆ ವಿತರಿಸಲಾಗಿದೆ. ಆಸ್ತಿ ಸಂಖ್ಯೆ ೨೮-೨-೫೫೩-೭೦೭ ಃ, ೨೮-೨-೫೫೩-೭೦೭ ಂ, ೨೮-೨-೫೫೩-೭೦೬ ಃ ನಂಬರ್‌ಗೆ ೩ ಇ-ಖಾತೆ ನೀಡಲಾಗಿದ್ದು, ಈ ಮೂರು ಖಾತೆಗಳಲ್ಲಿ ಮಹ್ಮದ್ ಮೌಲಾನ್ ಬಿನ್ ಮಹಾಬೂಬ್ ಸಾಬ್ ಎಂದು ಹೆಸರು ದಾಖಲಿಸಲಾಗಿದೆ. ೨೮-೨-೫೮೭-೭೦೪, ೨೮-೨-೫೫೩-೭೦೬ ಂ, ೨೮-೨-೫೮೭-೭೦೨, ೨೮-೨-೫೮೭-೬೯೬, ೨೮-೨-೫೮೭-೭೦೦ ಈ ಐದು ಇ-ಖಾತೆಗಳಲ್ಲಿ ಮಾಲೀಕನ ಹೆಸರು ಎಂ.ಡಿ.ಮೌಲಾ ಬಿನ್ ಮಹಾಬೂಬ್ ಸಾಬ್ ಎಂದು ನಮೂದಿಸಲಾಗಿದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ ಆಧರಿಸಿ, ಇ-ಖಾತೆ ನೀಡುವುದಾದರೇ, ಒಂದೇ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿ ವಿಭಿನ್ನ ಮೂರು ಹೆಸರುಗಳು ಇರಲು ಸಾಧ್ಯವೆ ಎನ್ನುವ ಪ್ರಶ್ನೆ ಅಷ್ಟೇ ಗಂಭೀರವಾಗಿದೆ. ಖೈಸರ್ ಅವರ ದೂರಿನ ತಿರುಳಿನಂತೆ ೩೪೧ ಲೇಔಟ್‌ನಲ್ಲಿ ಒಂದೇ ಒಂದು ನಿವೇಶನ ಇಲ್ಲ. ಈ ಲೇಔಟ್‌ನಲ್ಲಿ ಎಲ್ಲಾ ನಿವೇಶನ ಮಾರಾಟಗೊಂಡಿವೆ ಮತ್ತು ಕಟ್ಟಡ ನಿರ್ಮಿಸಲಾಗಿದೆ. ಖಾಲಿಯಿಲ್ಲದಿರುವ ಜಾಗಕ್ಕೆ ನಗರಸಭೆಯಿಂದ ಇ-ಖಾತೆ ಹಂಚಿಕೆ ಮಾಡಿರುವುದಾದರೂ ಏಕೆ ಎನ್ನುವುದು ಅವರ ಪ್ರಮುಖ ಪ್ರಶ್ನೆಯಾಗಿದೆ.
ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ತಮ್ಮ ಜೊತೆ ಸ್ಥಳ ಪರಿಶೀಲಿಸಬೇಕೆಂದು ಆಗ್ರಹಿಸಲಾಗಿದೆ. ಈಗಾಗಲೇ ೩೯೯ ಸರ್ಕಾರಿ ಜಮೀನಿನಲ್ಲಿ ಅತಿಕ್ರಮದ ಕಟ್ಟಡ ನಿರ್ಮಾಣವನ್ನು ಸ್ವತಃ ಸಹಾಯಕ ಆಯುಕ್ತರು ತೆರಳಿ, ಕಟ್ಟಡ ನಿರ್ಮಾಣ ತೆರವಿಗೆ ಆದೇಶಿಸಿದ್ದರು. ಈ ಪ್ರಕರಣ ಗಮನಿಸಿದರೇ, ಇ-ಖಾತೆ ಹಂಚಿಕೆಯಲ್ಲಿ ಈಗಾಗಲೇ ಜಿಲ್ಲಾಡಳಿತ ತನಿಖೆಯಲ್ಲಿ ಬಹಿರಂಗಗೊಂಡಂತೆ ಇ-ಖಾತೆ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವುದು ಅವರ ಆರೋಪವಾಗಿದೆ. ಇ-ಖಾತೆ ಹಂಚಿಕೆಯ ಪ್ರಕರಣದಲ್ಲಿ ಭಾಗೀಯಾದ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಇ-ಖಾತೆ ಅವ್ಯವಹಾರ ಪ್ರಕರಣ ಬಗೆದಷ್ಟೂ ಆಳದಲ್ಲಿ ಅವ್ಯವಹಾರದ ದಾಖಲೆಗಳು ದೊರೆಯುತ್ತಿವೆ. ಈಗಾಗಲೇ ಜಿಲ್ಲಾ ಯೋಜನಾ ನಿರ್ದೇಶಕರಿಂದ ಕಾರಣ ಕೇಳಿ ನೋಟೀಸ್ ನೀಡಿ, ನಿಗದಿತ ಅವಧಿ ಕಳೆದಿದ್ದರೂ, ಪೌರಾಯುಕ್ತರು ಇನ್ನೂವರೆಗೂ ಪ್ರತಿಕ್ರಿಯೆ ನೀಡದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
ಸರ್ವೆ ನಂ. ೩೯೯ ಹಾಗೂ ೩೪೧ ರ ವಿಷಯಕ್ಕೆ ಸಂಬಂಧಿಸಿ ಸಹಾಯಕ ಆಯುಕ್ತರ ಕಛೇರಿಯಿಂದ ದಾಖಲೆ ಸಂಗ್ರಹ ಪ್ರಕ್ರಿಯೆ ಆರಂಭಗೊಂಡಿದ್ದು, ಈ ದಾಖಲೆ ನಂತರ ಕಾನೂನು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗುವ ಸಾಧ್ಯತೆಗಳಿವೆ.