ಒಂದೇ ನಿವೇಶನಕ್ಕೆ ಎರಡು ಹಕ್ಕುಪತ್ರ: ಬಡವರಿಗೆ ಅನ್ಯಾಯ

ಸಿರಾ, ಆ. ೩- ಒಂದೇ ನಿವೇಶನಕ್ಕೆ ಎರಡು ಹಕ್ಕುಪತ್ರಗಳನ್ನು ನೀಡುವ ಮೂಲಕ ಬಡ ಫಲಾನುಭವಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಇಲ್ಲಿನ ನಗರಸಭೆ ಅಧಿಕಾರಿಗಳ ದುರಾಡಳಿತಕ್ಕೆ ಸಾಕ್ಷಿಯಾಗಿದೆ.
ದಶಕಗಳ ಕಾಲ ತಾಲ್ಲೂಕಿನ ಆಡಳಿತ ಚುಕ್ಕಾಣಿ ಹಿಡಿದು, ಸೈಟ್ ಕೊಡ್ತೀನಿ, ಕೊಡ್ತೀನಿ ಅಂತ ಕಾಗೆ ಹಾರಿಸುತ್ತಲೇ ಅಧಿಕಾರ ಕಳೆದುಕೊಂಡ ಮಾಜಿ ಸಚಿವರು ಕೊನೆಗೂ ತಮ್ಮ ಕಾಲಾವಧಿಯಲ್ಲಿ ಬಡವರಿಗೆ ಒಂದೇ ಒಂದು ನಿವೇಶನವನ್ನು ನೀಡಲು ಸಾಧ್ಯವಾಗಲಿಲ್ಲ.
ನಗರಸಭೆ ಆಡಳಿತದ ಕೊನೆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಅಮಾನುಲ್ಲಾಖಾನ್ ಅಲ್ಪಸಂಖ್ಯಾತರಿಗೆ ಸ ನಂ. ೫ ಮತ್ತು ೬ ರಲ್ಲಿ ಹಕ್ಕುಪತ್ರಗಳನ್ನು ನೀಡಿ, ಹಾಗೆಯೇ ವಾಪಸ್ಸು ಪಡೆದರು. ಇನ್ನು ಈ ಆಶ್ರಯ ನಿವೇಶನಗಳಿಗಾಗಿ ಅದೆಷ್ಟೋ ಜೀವಗಳು ಸಜೀವವಾಗಿಯೇ ದಹಿಸಿ ಹೋಗಿದ್ದು, ಈ ಎಲ್ಲದರ ಪರಿಣಾಮ ಅನೇಕ ಬಡ ಕುಟುಂಬಗಳು ಇನ್ನು ಗುಡಿಸಲಿನಲ್ಲಿಯೇ ಸಾವು ಬದುಕಿನ ನಡುವೆ ನರಳುತ್ತಾ ಬದುಕುವಂತಾಗಿದೆ.
ಹೀಗಿರುವಾಗ ಕಳೆದ ೨೦೨೦ ರಲ್ಲಿ ಶಾಸಕರಾಗಿ ಆಯ್ಕೆಯಾದ ಡಾ. ಸಿ.ಎಂ.ರಾಜೇಶ್ ಗೌಡ ಹೊಸತರಲ್ಲಿ ವೀರಾವೇಶದಿದ ಮುದಿಗೆರೆ ಕಾವಲ್‌ನ ಸರ್ವೇ ನಂ: ೧೯೪ ರಲ್ಲಿ ವಾಸಿಸುವ ಬಡವರಿಗೆ ನಿವೇಶನದ ಹಕ್ಕುಪತ್ರಗಳನ್ನು ನೀಡಿದರು. ಕಾನೂನು ರೀತಿಯಲ್ಲಿ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರವೇ ಕ್ರಮ ಕೈಗೊಂಡು ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ನೀಡಿದರು. ಆದರೆ ಹಕ್ಕುಪತ್ರಗಳನ್ನು ನೀಡಿದ ಮೇಲೆ ಅವರವರ ನಿವೇಶನಗಳನ್ನು ಗುರುತಿಸಿ ಕೊಡುವಂತಹ ಕೆಲಸವಾಗಲೀ ಅಥವಾ ಸದರಿ ಹಕ್ಕುಪತ್ರಗಳನ್ನು ಕಾನೂನು ರೀತ್ಯಾ ಖಾತೆ ಮಾಡಿಕೊಡುವುದಾಗಲೀ ಮಾಡದೇ ಇರುವುದು ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನೀಡಿರುವ ಹಕ್ಕುಪತ್ರಗಳ ಅನುಸಾರವಾಗಿ ಅವರವರ ಜಾಗಗಳನ್ನು ತೋರಿಸಬೇಕಾದ ನಗರಸಭಾ ಅಧಿಕಾರಿಗಳು ಆ ಕೆಲಸವನ್ನು ಮಾಡದೇ ಅದೇ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿ, ಗುಪ್ತ್ ಗುಪ್ತಾಗಿ ಬೇರೆ ಫಲಾನುಭವಿಗಳಿಗೆ ನೀಡಲು ಮುಂದಾಗಿದ್ದು ಸ್ಥಳೀಯ ಫಲಾನುಭವಿಗಳು ಪ್ರತಿಭಟನೆ ನಡೆಸಲು ಕಾರಣವಾಯಿತು.
ಹಾಲಿ ಹಕ್ಕುಪತ್ರಗಳನ್ನು ಪಡೆದಿರುವ ಅಮಾಯಕರು ಕಚೇರಿ ಬಾಗಿಲಿಗೆ ಅಲೆಯುವಂತಾಗಿದ್ದು, ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕಾದ ಶಾಸಕರೇ ಇಂದು ಒಂದೇ ನಿವೇಶನಕ್ಕೆ ಎರಡೆರಡು ಹಕ್ಕುಪತ್ರಗಳನ್ನು ನೀಡುವ ಮೂಲಕ ಅಮಾಯಕರಿಗೆ ಅನ್ಯಾಯ ಮಾಡುವಂತಾಗಿದೆ. ಇದರಿಂದ ಮತ್ತಷ್ಟು ಸಂಕಷ್ಟಗಳು ಎದುರಾಗುವಷ್ಟರಲ್ಲಿ ಶಾಸಕರು ಹಾಗೂ ನಗರಸಭಾಡಳಿತ ಎಚ್ಚೆತ್ತುಕೊಂಡು ಅನ್ಯಾಯಕ್ಕೊಳಗಾದವರಿಗೆ ಆಶ್ರಯ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪಯತ್ನ ಮಾಡಬೇಕಾಗಿದೆ.