ಒಂದೇ ದಿನ 3.5 ಲಕ್ಷ ಮಂದಿಗೆ ಸೋಂಕು: 2,762 ಮಂದಿ ಸಾವು

ನವದೆಹಲಿ,ಏ.೨೫- ದೇಶದಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸೋಂಕು ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ವೈರಾಣು ತಡೆಗೆ ಹರಸಾಹಸಪಡುವಂತಾಗಿದೆ.

ದೇಶದಲ್ಲಿ ೩,೪೯,೬೯೧ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ೨,೭೬೭ ಮಂದಿ ಸಾವನ್ನಪ್ಪಿದ್ಧಾರೆ. ಸೋಂಕು ಮತ್ತು ಸಾವಿನಲ್ಲಿ ಭಾರತ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದ್ದು, ತಲ್ಲಣ ಉಂಟುಮಾಡಿದೆ.

ನಿತ್ಯ ಹೆಚ್ಚುತ್ತಿರುವ ಸೋಂಕು ಮತ್ತು ಸಕ್ರಿಯ ಪ್ರಕರಣಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಆಮ್ಲಜನಕ ಪೂರೈಕೆ, ಔಷಧಿ, ಹಾಸಿಗೆ ಸಿಗದೆ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವು ರಾಜ್ಯ ಸರ್ಕಾರಗಳು ಸೋಂಕು ನಿರ್ವಹಣೆ ಮಾಡಲು ಸಾಧ್ಯವಾಗದೆ ಅಸಹಾಯಕವಾಗಿವೆ.

ಭಾರದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನ ಸಂಕಷ್ಟದ ಸಮಯದಲ್ಲಿ ಭಾರತದ ನೆರವಿಗೆ ನಿಲ್ಲುವುದಾಗಿ ಹೇಳಿದೆ. ಮತ್ತೊಂದೆಡೆ ಜರ್ಮನಿ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳು ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವುದಾಗಿ ಹೇಳಿವೆ.

ಈ ನಡುವೆ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಅಪಖ್ಯಾತಿಗೆ ಒಳಗಾಗಿರುವ ಚೀನಾ, ಸೋಂಕು ತಡೆಗೆ ಭಾರತಕ್ಕೆ ಬೇಕಾದ ತಾಂತ್ರಿಕ ನೆರವು ನೀಡುವುದಾಗಿ ಪ್ರಕಟಿಸಿದೆ. ಇದರ ಜೊತೆಗೆ ವಿಶ್ವದ ಅನೇಕ ದೇಶಗಳು ಭಾರತದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದ ಜೊತೆ ನಿಲ್ಲುವ ಭರವಸೆಯ ಮಾತನಾಡಿವೆ.

ದಾಖಲೆ ಏರಿಕೆ:

ದೇಶದಲ್ಲಿ ಇಂದು ಬೆಳಗ್ಗೆ ೮ ಗಂಟೆಯ ತನಕ ೩,೪೯,೬೯೧ ಮಂದಿಗೆ ಹೊಸಧಾಗಿ ಸೋಂಕು ತಗುಲಿದ್ದು ೨೭೬೭ ಮಂದಿ ಮೃತಪಟಟಿದ್ದಾರೆ. ೨,೧೭,೧೧೩ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತಯ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧,೬೯,೬೦,೧೭೨ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇಲ್ಲಿಯವರೆಗೆ ೧,೪೦,೮೫,೧೧೦ ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ೧,೯೨,೩೧೧ ಮಂದಿ ಸಾವನ್ನಪ್ಪಿದ್ಧಾರೆ ಎಂದು ಸಚಿವಲಯ ತಿಳಿಸಿದೆ.

ಸಕ್ರಿಯ ಪ್ರಕರಣ ಏರಿಕೆ:

ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರರಕಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಸದ್ಯ ದೇಶದಲ್ಲಿ ೨೬,೮೨,೭೫೧ ಮಂದಿಗೆ ಸಕ್ರಿಯ ಪ್ರಕರಣ ಏರಿಕೆಯಾಗಿದೆ. ನಿತ್ಯ ೧ ರಿಂದ ೨ ಲಕ್ಷ ಮಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ದೇಶದಲ್ಲಿ ಇದುವರೆಗೆ ೧೪,೦೯,೧೬,೪೧೭ ಮಂದಿ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.

ಸತತ ೪ನೇ ದಿನವೂ ಏರಿಕೆ

ದೇಶದಲ್ಲಿ ಸತತ ಮೂರನೇ ದಿನವೂ ೪ ನೇ ದಿನವೂ ೩ ಲಕ್ಷ ಗಡಿ ದಾಟಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ ನಿತ್ಯ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಗ್ರಹ ಮಾಡುವುದು ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸರ್ಕಾರಳಿಗೆ ತಲನೋವಾಗಿ ಪರಿಣಮಿಸಿದೆ.