ಒಂದೇ ದಿನ 247 ಕೋವಿಡ್ ಪತ್ತೆ: ಬೆಚ್ಚಿ ಬಿದ್ದ ಬಿದ್ರಿಗರು

ಬೀದರ‌:ಮಾ.30: ಜಿಲ್ಲೆಯಲ್ಲಿ ಹದಿನೈದು ದಿನಗಳಿಂದ ನಿತ್ಯ 50 ರಿಂದ 90ರ ಆಸುಪಾಸಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ಕೋವಿಡ್‌ ಸೋಂಕಿತರ ಸಂಖ್ಯೆ ಸೋಮವಾರ ಒಂದೇ ದಿನ ದಿಢೀರ್ 247ಕ್ಕೆ ಏರಿಕೆಯಾಗಿದೆ. ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಯೂ 748ಕ್ಕೆ ತಲುಪಿ ಜನರಲ್ಲಿ ಆಘಾತ ಮೂಡಿಸಿದೆ.

75 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಪರೀಕ್ಷೆ ಮಾಡುವ ವೈದ್ಯರಿಗೂ ಸೋಂಕು ದೃಢಪಟ್ಟಿದೆ. ಬಸವಕಲ್ಯಾಣದಲ್ಲೇ 10 ಪ್ರಕರಣಗಳು ದೃಢಪಟ್ಟಿವೆ. ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಪ್ರಚಾರಕ್ಕೆ ರಾಜಕಾರಣಿಗಳ ದಂಡು ಬರುತ್ತಿರುವ ಕಾರಣ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜು, ಗುಂಪಾದ ಜಾಬಶೆಟ್ಟಿ ಗರ್ಲ್ಸ್ ಹಾಸ್ಟೆಲ್, ಮೈಲೂರಿನ ಬಾಲ ಮಂದಿರ, ಬೀದರ್‌ ತಾಲ್ಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಿಮಕೋಡದ ಸರ್ಕಾರಿ ಶಾಲೆ, ಜಿಲ್ಲಾ ಕಾರಾಗೃಹದಲ್ಲಿ ಕೋವಿಡ್‌ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ವಾರ ನೌಬಾದ್‌ನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ 16 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಸೋಮವಾರ ಔರಾದ್‌ನ ಆದರ್ಶ ವಿದ್ಯಾಲಯದ 18 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ವಿದ್ಯಾಲಯ ಸೀಲ್ ಡೌನ್ ಮಾಡಲಾಗಿದೆ.

ಕೋವಿಡ್‌ ನಿಯಂತ್ರಿಸಲು ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶಿಸುವ ಗಡಿಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ, ಚಿಕ್ಕಲಿ, ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಸೇರಿ ಒಟ್ಟು ಏಳು ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ.

ಮುಂಬೈ, ಪುಣೆ ಹಾಗೂ ಲಾತೂರ್‌ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ರಾಜಕೀಯ ಸಮಾವೇಶ, ಜಾತ್ರೆಗಳನ್ನು ನಿಷೇಧಿಸಲಾಗಿದೆ. ಮದುವೆ ಸಮಾರಂಭಗಳಿಗೂ ಕೆಲ ನಿರ್ಬಂಧ ಹೇರಲಾಗಿದೆ. ನೆರೆಯ ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಕೊನೆಯ ಗಳಿಗೆಯಲ್ಲಿ ಊರು ಸೇರಿದ್ದ ಅನೇಕ ಕಾರ್ಮಿಕ ಕುಟುಂಬಗಳು
ಲಾಕ್‌ಡೌನ್‌ ತೆರವುಗೊಂಡ ನಂತರ ಮತ್ತೆ ಉದ್ಯೋಗ ಅರಿಸಿ ಮಹಾನಗರಗಳಿಗೆ ತೆರಳಿದ್ದವು. ಆ ಕುಟುಂಬಗಳು
ಮತ್ತೆ ಊರಿಗೆ ಮರಳುತ್ತಿವೆ.

ಮಹಾರಾಷ್ಟ್ರ ಒಂದರಿಂದಲೇ ನಿತ್ಯ ಮೂರು ಸಾವಿರ ಜನ ಜಿಲ್ಲೆಗೆ ಬರುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಮೂರು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಥರ್ಮಲ್‌ ಸ್ಕ್ರೀನಿಂಗ್ ಮಾಡಿ ಜ್ವರ ಕಂಡು ಬಂದ ಹಾಗೂ ವೈದ್ಯಕೀಯ ವರದಿ ತರದವರನ್ನು ಮರಳಿ ಕಳಿಸುತ್ತಿದ್ದಾರೆ. ಆದರೂ, ಕೆಲವರು ಕಳ್ಳದಾರಿಗಳ ಮೂಲಕ ಜಿಲ್ಲೆಯೊಳಗೆ ನುಸುಳಿ ಬರುತ್ತಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿವೆ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ. ಜನ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.

‘ಸಾರ್ವಜನಿಕರು ಮದುವೆ, ಜಾತ್ರೆ ಹಾಗೂ ಸಮಾವೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ವೈಯಕ್ತಿಕ ಆರೋಗ್ಯ ಹಾಗೂ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಒತ್ತು ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.‌