ಒಂದೇ ದಿನ 2.59 ಲಕ್ಷ ಮಂದಿಗೆ ಸೋಂಕು: 1761 ಸಾವು

ನವದೆಹಲಿ,ಏ.೨೦- ದೇಶದಲ್ಲಿ ಮಹಾಮಾರಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ಕಳೆದ ೨೪ ತಾಸುಗಳ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ೧,೭೬೧ ಜನರು ಬಲಿಯಾಗಿದ್ದಾರೆ. ಒಂದೇ ದಿನ ೨.೫೯ ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ದಿನದಿಂದ ದಿನಕ್ಕೆ ಹೊಸ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರವನ್ನು ಭೀತಿಗೆ ಸಿಲುಕಿಸಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಶುಕ್ರವಾರ ೮ ಗಂಟೆಗೆ ಮುಕ್ತಾಯವಾದ ೨೪ ತಾಸು ಅವಧಿಯಲ್ಲಿ ದೇಶಾದ್ಯಂತ ಒಟ್ಟು ೨.೩೪,೬೯೨ ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧,೫೩,೨೧,೦೮೯ಕ್ಕೆ ಏರಿಕೆಯಾಗಿದೆ.
ಒಂದೇ ದಿನ ೧,೭೫೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ ೧,೮೦,೫೩೦ಕ್ಕೆ ಏರಿಕೆಯಾಗಿದೆ. ಪ್ರತಿನಿತ್ಯ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗುತ್ತಿರುವುದು ತಲ್ಲಣವುಂಟು ಮಾಡಿದೆ. ಒಟ್ಟಾರೆ ದೇಶದಲ್ಲಿ ೨೦,೩೧,೯೭೭ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ ೨೪ ಗಂಟೆಗಳಲ್ಲಿ ೧,೫೪,೭೬೦ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ ೧,೩೧,೦೮,೫೮೨ಕ್ಕೆ ಏರಿದೆ.
ದೇಶದಲ್ಲಿ ಒಂದೇ ದಿನ ೧೫,೧೯,೪೮೬ ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ ದೇಶದಲ್ಲಿ ೨೬,೯೪,೧೪,೦೩೫ ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ ಎಂದು ಐಸಿಎಂಆರ್ ವಿವರಿಸಿದೆ.
ಜ. ೧೬ ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ್ದರು. ಆರಂಭದಲ್ಲಿ ಕೊರೊನಾ ವಾರಿಯರ್ಸ್‌ಗೆ ಮೊದಲ ಆಧ್ಯತೆ ನೀಡಲಾಗಿತ್ತು. ಆನಂತರ ೬೦ ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಿತ್ತು. ಇದಾದ ಕೆಲವು ದಿನಗಳ ನಂತರ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.
ಈ ಲಸಿಕೆ ಅಭಿಯಾನ ಆರಂಭವಾದ ನಂತರ ಇಲ್ಲಿಯವರೆಗೂ ೧೨,೭೧,೨೯,೧೧೩ ಮಂದಿಗೆ ಲಸಿಕೆ ನೀಡಲಾಗಿದೆ. ಮುಂದಿನ ತಿಂಗಳಿನಿಂದ ೧೮ ವರ್ಷದ ವಯೋಮಾನದವರಿಗೂ ಲಸಿಕೆ ವಿತರಿಸಲು ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಲಸಿಕೆಗಳನ್ನು ಮಾರುಕಟ್ಟೆಗೂ ಬಿಡಗಡೆ ಮಾಡುವ ನಿರ್ಧಾರ ಕೈಗೊಂಡಿದೆ. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿರುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.