ಒಂದೇ ದಿನ ೨೦ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

ನವದೆಹಲಿ, ಜ. ೧- ದೇಶಾದ್ಯಂತ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರೆದಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೦ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಜನರ ನೆಮ್ಮದಿಗೆ ಭಂಗ ವನ್ನು ಉಂಟುಮಾಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೦ ಸಾವಿರದ ೩೫ ಸೋಂಕು ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಇದರೊಂದಿಗೆ ಇದುವರೆಗೂ ದೇಶದಲ್ಲಿ ದಾಖಲಾಗಿರುವ ಒಟ್ಟು ಸೋಂಕಿತರ ಸಂಖ್ಯೆ ಒಂದು ಕೋಟಿ ಎರಡು ಲಕ್ಷ ೮೬ ಸಾವಿರದ ೭೦೯ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೫೬ ಸೋಂಕಿತರು ಸಾವನ್ನಪ್ಪಿದ್ದು ಇದರೊಂದಿಗೆ ಇದುವರೆಗೂ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ೪೮ ಸಾವಿರದ ೯೯೪ ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ೨೩ ಸಾವಿರದ ೧೮೧ ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೂ ಚೇತರಿಸಿಕೊಂಡವರ ಸಂಖ್ಯೆ ೯೮,೮೮,೪೬೧ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದ್ದು ಮೂರು ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಈ ಸಂಖ್ಯೆ ೩೪೦೨ ಕಡಿಮೆಯಾಗಿದ್ದು ಇದರೊಂದಿಗೆ ಎರಡು ಲಕ್ಷದ ೫೪ ೨೫೪ ಪ್ರಕರಣಗಳು ಮಾತ್ರವೇ ದಾಖಲಾಗಿದೆ.
ಎಲ್ಲ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಮುದಾಯ ಹಗಲಿರುಳು ಚಿಕಿತ್ಸೆ ನೀಡುವಲ್ಲಿ ನಿರತವಾಗಿದೆ. ವೈದ್ಯಕೀಯ ಸಮುದಾಯದ ಪರಿಶ್ರಮದಿಂದ ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡ ಅಷ್ಟಿದೆ.
ಸಾವಿನ ಪ್ರಮಾಣ ಶೇಕಡ ೧.೪೫ ರಷ್ಟಿದ್ದು ಈ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಲು ವೈದ್ಯರು ಮತ್ತು ಸಿಬ್ಬಂದಿ ಶ್ರಮಪಡುತ್ತಿದ್ದಾರೆ. ರಾಷ್ಟ್ರದೆಲ್ಲೆಡೆ ಕೋವಿಡ್ ೧೯ ನಿಗ್ರಹ ಕುರಿತ ಲಸಿಕೆ ಕುರಿತಂತೆ ತೀವ್ರ ಕುತೂಹಲ ಹೆಚ್ಚಾಗುತ್ತಿದೆ.
ಕೇಂದ್ರ ಸರ್ಕಾರ ರಚಿಸಿರುವ ವಿಷಯ ತಜ್ಞರ ಸಮಿತಿ ವಿವಿಧ ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳ ಸುರಕ್ಷತೆ ಹಾಗೂ ಗುಣಮಟ್ಟ ಕುರಿತು ಪರಿಶೀಲನೆ ನಡೆಸುತ್ತಿದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ.
ಆಕ್ಸ್ಫರ್ಡ್ ಯುನಿವರ್ಸಿಟಿ ಆಸ್ಟ್ರಾಝೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿ ಶೀಲ್ಡ್, ಭಾರತ್ ಬಯೋಟಿಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್, ಹಾಗೂ ಅಮೆರಿಕದ ಫೈ ಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗಳ ಬಳಕೆ ಕುರಿತು ಗಂಭೀರವಾಗಿ ಪರಿಶೀಲನೆ ನಡೆಯುತ್ತಿದೆ.